ADVERTISEMENT

ಬೆಂಗಳೂರು | ಲಾರಿ, ಮೂರು ಖಾಸಗಿ ಬಸ್‌ಗಳ ನಡುವೆ ಅಪಘಾತ; 30 ಪ್ರಯಾಣಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 14:27 IST
Last Updated 27 ಡಿಸೆಂಬರ್ 2023, 14:27 IST
ನೆಲಮಂಗಲ ತಾಲ್ಲೂಕಿನ ತೊಣಚಿನಗುಪ್ಪೆ ಎಂಬಲ್ಲಿ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾದ ಬಸ್‌ ಅನ್ನು ಕ್ರೇನ್‌ ಸಹಾಯದಿಂದ ತೆರವು ಮಾಡಲಾಯಿತು.
ನೆಲಮಂಗಲ ತಾಲ್ಲೂಕಿನ ತೊಣಚಿನಗುಪ್ಪೆ ಎಂಬಲ್ಲಿ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾದ ಬಸ್‌ ಅನ್ನು ಕ್ರೇನ್‌ ಸಹಾಯದಿಂದ ತೆರವು ಮಾಡಲಾಯಿತು.   

ಬೆಂಗಳೂರು: ತುಮಕೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಬುಧವಾರ ಮುಂಜಾನೆ ಲಾರಿ ಹಾಗೂ ಖಾಸಗಿ ಬಸ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 30 ಪ್ರಯಾಣಿಕರು ಗಾಯಗೊಂಡಿದ್ದರು. ಎಲ್ಲ ಪ್ರಯಾಣಿಕರೂ ಅಪಾಯದಿಂದ ಪಾರಾಗಿದ್ದಾರೆ.

ನೆಲಮಂಗಲ ತಾಲ್ಲೂಕಿನ ತೊಣಚಿನಗುಪ್ಪೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಲಾರಿ ನಿಂತಿತ್ತು. ಅದೇ ವೇಳೆಯಲ್ಲಿ ದಟ್ಟವಾದ ಮಂಜು ಮುಸುಕಿದ ವಾತಾವರಣವಿತ್ತು. ವೇಗವಾಗಿ ಬಂದ ಖಾಸಗಿ ಬಸ್‌ವೊಂದು ನಿಂತಿದ್ದ ಲಾರಿಗೆ ಡಿಕ್ಕಿಯಾಗಿದೆ. ಹಿಂದಿನಿಂದ ಬಂದ ಮತ್ತೆ ಎರಡು ಬಸ್‌ಗಳು, ಲಾರಿ ಹಾಗೂ ಬಸ್‌ಗೆ ಡಿಕ್ಕಿಯಾಗಿದ್ದು, ಹಲವರು ಗಾಯಗೊಂಡಿದ್ದರು.

ಲಾರಿ ಹಾಗೂ ದುರ್ಗಾಂಬ, ಶಿವಗಂಗ, ಧ್ಯಾನ್ ಹೆಸರಿನ ಖಾಸಗಿ ಬಸ್‌ಗಳು ನಡುವೆ ಸರಣಿ ಅಪಘಾತವಾಗಿದೆ. ಮೂರು ಖಾಸಗಿ ಬಸ್‌ಗಳೂ ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದವು. ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಏಳು ಮಂದಿಯನ್ನು ಆಂಬುಲೆನ್ಸ್‌ನಲ್ಲಿ ನೆಲಮಂಗಲ ಅಸ್ಪತ್ರೆಗೆ ಕಳುಹಿಸಿ, ಚಿಕಿತ್ಸೆ ಕೊಡಿಸಲಾಯಿತು ಎಂದು ನೆಲಮಂಗಲ ಸಂಚಾರ ಪೊಲೀಸರು ಹೇಳಿದರು.

ADVERTISEMENT

ಬಸ್‌ಗಳು ಒಂದಕ್ಕೊಂದು ಡಿಕ್ಕಿಯಾಗಿ ರಸ್ತೆಗೆ ಅಡ್ಡಲಾಗಿ ನಿಂತಿದ್ದವು. ಇದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ರಸ್ತೆಯ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ಸ್ಥಳಕ್ಕೆ ಕ್ರೇನ್‌ ತರಿಸಿ ಬಸ್‌ಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

‘ಲಾರಿಗೆ ಬಸ್‌ ಡಿಕ್ಕಿಯಾದ ರಭಸಕ್ಕೆ ದೊಡ್ಡ ಶಬ್ದಬಂತು. ನಿದ್ರೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಕ್ಷಣಕಾಲ ಆತಂಕಗೊಂಡರು. ಸ್ಥಳೀಯರು ಎಲ್ಲ ಪ್ರಯಾಣಿಕರನ್ನು ಹೊರಗೆ ಕರೆತಂದರು’ ಎಂದು ಪ್ರಯಾಣಿಕರೊಬ್ಬರು ಹೇಳಿದರು.

ಎಂ.ಜಿ ರಸ್ತೆಯಲ್ಲೂ ಅಪಘಾತ

ಮಹಾತ್ಮ ಗಾಂಧಿ ರಸ್ತೆಯಲ್ಲೂ ಮಂಗಳವಾರ ಮಧ್ಯರಾತ್ರಿ ಸರಣಿ ಅಪಘಾತವಾಗಿದೆ. ಘಟನೆಯಲ್ಲಿ ಮೂರು ಕಾರುಗಳಿಗೆ ಹಾನಿಯಾಗಿದೆ.

ವೇಗವಾಗಿ ಚಲಿಸುತ್ತಿದ್ದ ಮುಂಭಾಗದ ಕಾರಿನ ಚಾಲಕ ದಿಢೀರ್‌ ಎಂದು ಬ್ರೇಕ್‌ ಹಾಕಿದ ಪರಿಣಾಮ ಸರಣಿ ಅಪಘಾತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜಖಂಗೊಂಡ ಬಸ್‌.
ಮಹಾತ್ಮ ಗಾಂಧಿ ರಸ್ತೆಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರೊಂದು ಜಖಂಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.