ADVERTISEMENT

ಅಪಘಾತ: ಬಿಎಂಟಿಸಿ ಬಸ್ ಹರಿದು ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 23 ಮೇ 2022, 16:31 IST
Last Updated 23 ಮೇ 2022, 16:31 IST
   

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಅಪಘಾತ ಸಂಭವಿಸಿದ್ದು, ಬಿಎಂಟಿಸಿ ಬಸ್ ಮೈ ಮೇಲೆ ಹರಿದು ಮಂಜುನಾಥ್ (25) ಎಂಬುವರು ಮೃತಪಟ್ಟಿದ್ದಾರೆ.

‘ಗದಗ ಜಿಲ್ಲೆಯ ಮಂಜುನಾಥ್, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಂಕದಕಟ್ಟೆಯಲ್ಲಿ ವಾಸವಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೀಣ್ಯ ಸಂಚಾರ ಪೊಲೀಸರು ಹೇಳಿದರು.

‘ಸ್ನೇಹಿತರೊಬ್ಬರು ಊರಿಗೆ ಹೊರಟಿದ್ದರು. ಅವರನ್ನು ಜಾಲಹಳ್ಳಿಗೆ ಬಿಟ್ಟು ಬರಲು ಮಂಜುನಾಥ್ ಬೈಕ್‌ನಲ್ಲಿ ಹೋಗಿದ್ದರು. ರಾತ್ರಿ 9.30ರ ಸುಮಾರಿಗೆ ಸ್ನೇಹಿತರನ್ನು ಬಿಟ್ಟು ವಾಪಸು ಸುಂಕದಕಟ್ಟೆಯತ್ತ ಹೊರಟಿದ್ದರು.’

ADVERTISEMENT

‘ಪೀಣ್ಯ ಕೈಗಾರಿಕಾ ಪ್ರದೇಶದ 14ನೇ ಅಡ್ಡರಸ್ತೆಯಲ್ಲಿ ಮಂಜುನಾಥ್ ಅವರ ಬೈಕ್‌ಗೆ, ಇನ್ನೊಂದು ಬೈಕ್ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಮಂಜುನಾಥ್ ರಸ್ತೆ ಮಧ್ಯದಲ್ಲಿ ಬಿದ್ದಿದ್ದರು. ಅದೇ ಮಾರ್ಗವಾಗಿ ಹೊರಟಿದ್ದ ಬಿಎಂಟಿಸಿ ಬಸ್ಸಿನ ಚಕ್ರ ಮೈ ಮೇಲೆ ಹರಿದಿತ್ತು. ತೀವ್ರ ಗಾಯಗೊಂಡು ಮಂಜುನಾಥ್ ಮೃತಪಟ್ಟರು’ ಎಂದೂ ತಿಳಿಸಿದರು.

‘ಅಪಘಾತವನ್ನುಂಟು ಮಾಡಿದ್ದ ಬೈಕ್ ಸವಾರ ಹಾಗೂ ಬಿಎಂಟಿಸಿ ಬಸ್ ಚಾಲಕನ ವಿರುದ್ಧ ಅತೀ ವೇಗ ಹಾಗೂ ಅಜಾಗರೂಕತೆ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೈಕ್ ಹಾಗೂ ಬಸ್ ಈಗಾಗಲೇ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.