ADVERTISEMENT

ಸಹೋದರನ ನಿಶ್ಚಿತಾರ್ಥಕ್ಕೆ ಹೊರಟಿದ್ದ ಮಹಿಳೆ ಸಾವು

ನೈಸ್‌ ರಸ್ತೆಯಲ್ಲಿ ಅಪಘಾತ: ಪತಿ– ಮಗುವಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 22:26 IST
Last Updated 17 ಮಾರ್ಚ್ 2022, 22:26 IST

ಬೆಂಗಳೂರು: ನೈಸ್ ರಸ್ತೆಯ ಕನಕಪುರ ಟೋಲ್‌ ಗೇಟ್ ಬಳಿ ಗುರುವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಸಂಧ್ಯಾ (21) ಎಂಬುವರು ಮೃತಪಟ್ಟಿದ್ದಾರೆ.

‘ತಾತಗುಣಿ ಎಸ್ಟೇಟ್ ನಿವಾಸಿ ಸಂಧ್ಯಾ, ಪತಿ ಪೆರುಮಾಳ್ (30) ಹಾಗೂ ಒಂದೂವರೆ ವರ್ಷದ ಗಂಡು ಮಗುವಿನ ಜೊತೆ ಬೈಕ್‌ನಲ್ಲಿ ಹೊರಟಿದ್ದಾಗ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಪೆರುಮಾಳ್ ಹಾಗೂ ಮಗು ಗಾಯಗೊಂಡಿದೆ’ ಎಂದು ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಸಂಧ್ಯಾ ತವರು ಮನೆ ತಮಿಳುನಾಡು. ಅವರ ಸಹೋದರನ ನಿಶ್ಚಿತಾರ್ಥವನ್ನು ಗುರುವಾರ ಏರ್ಪಡಿಸಲಾಗಿತ್ತು. ಹೀಗಾಗಿ, ಪತಿ ಹಾಗೂ ಮಗುವಿನ ಜೊತೆಯಲ್ಲಿ ತಮಿಳುನಾಡಿಗೆ ಹೊರಟಿದ್ದರು. ಪತಿ ಬೈಕ್ ಚಲಾಯಿಸುತ್ತಿದ್ದರು. ಕನಕಪುರ ಟೋಲ್ ಬಳಿ ಅತೀ ವೇಗವಾಗಿ ಬಂದ್ ಟಿಪ್ಪರ್ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದಿತ್ತು.’

ADVERTISEMENT

‘ಮೂವರೂ ರಸ್ತೆಗೆ ಬಿದ್ದಿದ್ದರು. ಸಂಧ್ಯಾ ಅವರ ದೇಹವನ್ನು ಟಿಪ್ಪರ್ ಲಾರಿ ಉಜ್ಜಿಕೊಂಡು ಹೋಗಿತ್ತು. ತೀವ್ರ ಗಾಯಗೊಂಡಿದ್ದ ಸಂಧ್ಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು’ ಎಂದೂ ಪೊಲೀಸರು ವಿವರಿಸಿದರು.

ಮಗು ಉಳಿಸಿಕೊಂಡ ತಂದೆ: ‘ಅಪಘಾತ ಸಂಭವಿಸಿದ್ದ ವೇಳೆ ತಾಯಿ ಸಂಧ್ಯಾ ಪಕ್ಕದಲ್ಲೇ ಮಗು ಬಿದ್ದಿತ್ತು. ಪೆರುಮಾಳು ಅವರು ಮಗುವನ್ನು ಎಳೆದುಕೊಂಡು ರಸ್ತೆ ಪಕ್ಕಕ್ಕೆ ಉರುಳಿದ್ದರು. ಪತ್ನಿಯನ್ನು ಎಳೆದುಕೊಳ್ಳಬೇಕು ಎನ್ನುಷ್ಟರಲ್ಲೇ ಲಾರಿ ಉಜ್ಜಿಕೊಂಡು ಹೋಗಿತ್ತು’ ಎಂದು ಪೊಲೀಸರು ಹೇಳಿದರು.

‘ಪೆರುಮಾಳ್ ಹಾಗೂ ಮಗುವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅಪಘಾತಕ್ಕೆ ಕಾರಣನಾದ ಆರೋಪದಡಿ ಟಿಪ್ಪರ್ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.