ಅಪಘಾತ
–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸದಾಶಿವನಗರದ ಬಿಎಚ್ಇಎಲ್ ಕೆಳಸೇತುವೆಯ ಬಳಿ ಬುಧವಾರ ಬೆಳಿಗ್ಗೆ 6.30ರ ಸುಮಾರಿಗೆ ಹಾಲಿನ ಟ್ಯಾಂಕರ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಹಿಂಬದಿಯ ಸವಾರ ಮೃತಪಟ್ಟಿದ್ದಾರೆ.
ಹರ್ಷ (17) ಮೃತಪಟ್ಟವರು. ಸವಾರ ಸಚಿನ್ ಅವರು ಗಾಯಗೊಂಡಿದ್ದಾರೆ.
ಸಚಿನ್ ಅವರು ತನ್ನ ಸ್ನೇಹಿತ ಹರ್ಷ ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ನ್ಯೂ ಬಿಇಎಲ್ ಮುಖ್ಯ ರಸ್ತೆಯಲ್ಲಿ ತನಿಷ್ಕ್ ಜ್ಯುವೆಲರ್ಸ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಸರ್ಕಲ್ ಮಾರಮ್ಮ ದೇವಸ್ಥಾನದ ಕಡೆಯಿಂದ ಹೋಗುತ್ತಿರುವಾಗ ಸದಾಶಿವನಗರದ ಬಿಎಚ್ಇಎಲ್ ಕೆಳಸೇತುವೆಯ ಮೇಲ್ಭಾಗದ ಸರ್ವೀಸ್ ರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಹಾಲಿನ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಕೆಳಕ್ಕೆ ಬಿದ್ದಿದ್ದರು. ಸಚಿನ್ ಅವರ ಕೈ ಹಾಗೂ ಎಡ ಕಾಲಿಗೆ ಗಾಯವಾಗಿದೆ. ಹಿಂದೆ ಕುಳಿತಿದ್ದ ಹರ್ಷ ಅವರ ತಲೆ, ಮುಖ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರವಾದ ಗಾಯವಾಗಿತ್ತು. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಹರ್ಷ ಮೃತಪಟ್ಟಿದ್ದಾರೆ. ಸಚಿನ್ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದ್ಯ ಸೇವಿಸಿದ್ದ ಚಾಲಕ: ‘ಹಾಲಿನ ಟ್ಯಾಂಕರ್ ಚಾಲಕ ಅತಿ ವೇಗದಿಂದ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಪರಿಣಾಮ ಅಪಘಾತ ನಡೆದಿದೆ. ಚಾಲಕ ನಾಗೇಶ್ (37) ಮದ್ಯ ಸೇವಿಸಿ ಚಾಲನೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.
ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.