ADVERTISEMENT

ಗೋ ಮಾಂಸ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ ಸುಲಿಗೆ: ಕಾಂಗ್ರೆಸ್ ವಾರ್ಡ್‌ ಸದಸ್ಯ ಬಂಧನ

ಗೋಮಾಂಸ ಸಾಗಣೆ ವಿರುದ್ಧ ಪ್ರತ್ಯೇಕ ಎಫ್‌ಐಆರ್: ಇಬ್ಬರು ಸೆರೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 16:23 IST
Last Updated 23 ಜೂನ್ 2023, 16:23 IST
Crime.
Crime.   

ಬೆಂಗಳೂರು: ಗೋ ಮಾಂಸ ಸಾಗಿಸುತ್ತಿದ್ದ ಸ್ಕಾರ್ಫಿಯೊ ವಾಹನ ಅಡ್ಡಗಟ್ಟಿ ಅಪಘಾತದ ನೆಪದಲ್ಲಿ ಸುಲಿಗೆ ಮಾಡಿದ್ದ ಆರೋಪದಡಿ ಪ್ರಶಾಂತ್ ಹಾಗೂ ಸೋಮುಗೌಡ ಅವರನ್ನು ಆರ್‌.ಎಂ.ಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತ ಪ್ರಶಾಂತ್, ಕಾಂಗ್ರೆಸ್‌ ಪಕ್ಷದ ಸುಂಕದಕಟ್ಟೆ ವಾರ್ಡ್‌ ಸದಸ್ಯ. ಸಹಚರ ಸೋಮುಗೌಡ ಜೊತೆ ಸೇರಿ ಕೃತ್ಯ ಎಸಗಿದ್ದ’ ಎಂದು ಪೊಲೀಸರು ಹೇಳಿದರು.

‘ಮಾಗಡಿ ಗಂಗೊಂಡನಹಳ್ಳಿಯ ಉಮೇಶ್ ಹಾಗೂ ಖಾಜಾ ಮೊಹಿನ್, ಸ್ಕಾರ್ಫಿಯೊ ವಾಹನದಲ್ಲಿ ಗೋಮಾಂಸ ಇಟ್ಟುಕೊಂಡು ಶಿವಾಜಿನಗರಕ್ಕೆ ಜೂನ್ 21ರಂದು ಹೊರಟಿದ್ದರು. ಇನ್ನೊವಾ ಕ್ರಿಸ್ಟಾ ವಾಹನದಲ್ಲಿ ಬಂದಿದ್ದ ಆರೋಪಿಗಳು, ಬೆಳಿಗ್ಗೆ 8.30ರ ಸುಮಾರಿಗೆ ಎಂ.ಇ.ಐ ರಸ್ತೆಯಲ್ಲಿ ಸ್ಕಾರ್ಫಿಯೊ ವಾಹನ ಅಡ್ಡಗಟ್ಟಿದ್ದರು.’

ADVERTISEMENT

‘ಮಾರ್ಗಮಧ್ಯೆ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದ್ದಿರಾ. ಇದರಿಂದ ವಾಹನ ಜಖಂಗೊಂಡಿದ್ದು, ದುರಸ್ತಿಗೆ ಹಣ ನೀಡಿ’ ಎಂದು ಆರೋಪಿಗಳು ಒತ್ತಾಯಿಸಿದ್ದರು. ಯಾವುದೇ ಅಪಘಾತ ಮಾಡಿಲ್ಲವೆಂದು ಉಮೇಶ್ ಹಾಗೂ ಖಾಜಾ ಮೊಹೀನ್ ಹೇಳಿದ್ದರು. ಸುಮ್ಮನಾಗದ ಆರೋಪಿಗಳು, ಇಬ್ಬರ ಮೇಲೆ ಹಲ್ಲೆ ಮಾಡಿದ್ದರು. ವಾಹನ ಸಮೇತ ಇಬ್ಬರನ್ನು ಅಪಹರಿಸಿ,  ₹ 15 ಸಾವಿರ ಕಿತ್ತುಕೊಂಡಿದ್ದರು.’

‘ವಾಹನದಲ್ಲಿ ಗೋ ಮಾಂಸ ಇರುವುದನ್ನು ನೋಡಿದ್ದ ಆರೋಪಿಗಳು, ‘ಗೋಮಾಂಸ ಸಾಗಣೆ ಮಾಡುತ್ತಿದ್ದಿರಾ? ನಿಮ್ಮನ್ನು ಪೊಲೀಸರಿಗೆ ಹಿಡಿದು ಕೊಡುತ್ತೇವೆ. ಈ ರೀತಿ ಮಾಡಬಾರದೆಂದರೆ, ₹ 2 ಲಕ್ಷ ನೀಡಿ’ ಎಂದು ಬೇಡಿಕೆ ಇರಿಸಿದ್ದರು. ಹಣ ನೀಡಲು ಒಪ್ಪದ ಉಮೇಶ್ ಖಾಜಾ ಮೊಹಿನ್, ಅಲ್ಲಿಂದ ತಪ್ಪಿಸಿಕೊಂಡಿದ್ದರು. ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಪ್ರಶಾಂತ್ ಹಾಗೂ ಸೋಮುಗೌಡನನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

ಗೋಮಾಂಸ ಸಾಗಣೆ ವಿರುದ್ಧವೂ ಎಫ್‌ಐಆರ್: ‘ಮಾಗಡಿ ಬಳಿಯ ಹುರಳೇನಹಳ್ಳಿಯಲ್ಲಿ 200 ಕೆ.ಜಿ ಗೋ ಮಾಂಸ ಖರೀದಿಸಿದ್ದ ಉಮೇಶ್ ಹಾಗೂ ಖಾಜಾ ಮೊಹಿನ್, ಅದೇ ಮಾಂಸವನ್ನು ಶಿವಾಜಿನಗರದ ಮಾರುಕಟ್ಟೆಗೆ ಅಕ್ರಮವಾಗಿ ಸಾಗಿಸುತ್ತಿದ್ದರು. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಸ್ಕಾರ್ಫಿಯೊ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಸಂಗತಿ ಪ್ರಶಾಂತ್‌ಗೆ ಆರಂಭದಲ್ಲಿ ಗೊತ್ತಿರಲಿಲ್ಲ. ಗೊತ್ತಾದ ನಂತರವೇ ಆತ ₹ 2 ಲಕ್ಷಕ್ಕೆ ಬೇಡಿಕೆ ಇರಿಸಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ. ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.