ADVERTISEMENT

ಹುಟ್ಟುಹಬ್ಬದ ದಿನವೇ ಸಾವು ಕಂಡ ವಿದ್ಯಾರ್ಥಿ!

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:02 IST
Last Updated 17 ಡಿಸೆಂಬರ್ 2018, 20:02 IST

ಬೆಂಗಳೂರು: ನಗರದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದ ಜಾರ್ಖಂಡ್‌ನ ಸಿಐಎಸ್‌ಎಫ್ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ) ಅಧಿಕಾರಿಯೊಬ್ಬರ ಮಗ, ತಮ್ಮ ಹುಟ್ಟುಹಬ್ಬದ ದಿನವೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಚನ್ನಸಂದ್ರದ ಆರ್‌ಎನ್‌ಎಸ್‌ಐಟಿ ಕಾಲೇಜಿನ ವಿದ್ಯಾರ್ಥಿ ಶಿವಂ ಕುಮಾರ್ ಚೌಧರಿ (20) ಮೃತಪಟ್ಟವರು. ತಮ್ಮ ಹುಟ್ಟುಹಬ್ಬದ ಆಚರಣೆಗೆಂದು ಭಾನುವಾರ ಸ್ನೇಹಿತರ ಮನೆಗೆ ಹೋಗಿದ್ದ ಅವರು, ಸಂಜೆ 6.15ರ ಸುಮಾರಿಗೆ ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ವಾಪಸಾಗುತ್ತಿದ್ದರು. ಈ ವೇಳೆ ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಬೈಕ್‌ನಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಶಿವಂ ಅವರ ಅಕ್ಕ ಪ್ರತಿಭಾ ಕೂಡ ಅದೇ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಸದ್ಯ ಕೆಲಸದ ಹುಡುಕಾಟದಲ್ಲಿದ್ದ ಅವರು, ತಮ್ಮನ ಜತೆ ದ್ವಾರಕಾನಗರದ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲೇ ಉಳಿದುಕೊಂಡಿದ್ದರು. ಬೆಳಿಗ್ಗೆ ಅಕ್ಕನ ಜತೆ ಹುಟ್ಟುಹಬ್ಬ ಆಚರಿಸಿದ್ದ ಅವರು, ಆ ನಂತರ ಬಿಟಿಎಂ ಲೇಔಟ್‌ಗೆ ತೆರಳಿ ಗೆಳೆಯರೊಂದಿಗೆ ಸಂಜೆವರೆಗೂ ಕಾಲ ಕಳೆದಿದ್ದರು.

ADVERTISEMENT

‘ಶಿವಂ ಹೆಲ್ಮೆಟ್ ಧರಿಸಿರಲಿಲ್ಲ. ವೇಗವಾಗಿ ಬೈಕ್ ಓಡಿಸಿಕೊಂಡು ಬಂದಿರುವ ಅವರು, ಮಂತ್ರಿ ಅಪಾರ್ಟ್‌ಮೆಂಟ್ ಸಮುಚ್ಚಯದ ಎದುರಿನ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾರೆ. ತಕ್ಷಣ ರಕ್ಷಣೆಗೆ ಧಾವಿಸಿದ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಗಾರ್ಡ್‌ಗಳು, ನೀರು ಕುಡಿಸಿ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಗಾಯಾಳು ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ’ ಎಂದು ಕೆಂಗೇರಿ ಸಂಚಾರ ಪೊಲೀಸರು ಹೇಳಿದರು.

ಶಿವಂ ಹಾಗೂ ಪ್ರತಿಭಾ ಜಾರ್ಖಂಡ್‌ನವರು. ಅವರ ತಂದೆ ಸುರೇಶ್ ಬೆಳಿಗ್ಗೆ ನಗರಕ್ಕೆ ಬಂದಿದ್ದರು. ಅಂತ್ಯಕ್ರಿಯೆ ನಡೆಸಿ ಶವ ಹಸ್ತಾಂತರಿಸಲಾಗಿದೆ. ‘ಸವಾರ ತುಂಬ ವೇಗವಾಗಿ ಬೈಕ್ ಓಡಿಸಕೊಂಡು ಬಂದ. ಆ ಬೈಕ್‌ನ ಶಬ್ದ ಕೇಳಿ ನಮಗೇ ಭಯವಾಯಿತು. ನೋಡ ನೋಡುತ್ತಿದ್ದಂತೆಯೇ ಬೈಕ್ ನೆಲಕ್ಕುರುಳಿ ಸವಾರ ಸುಮಾರು 30 ಮೀಟರ್‌ನಷ್ಟು ದೂರ ರಸ್ತೆಯಲ್ಲೇ ಜಾರಿಕೊಂಡು ಹೋದ’ ಎಂದು ಸೆಕ್ಯುರಿಟಿ ಗಾರ್ಡ್‌ಗಳು ಹೇಳಿಕೆ ಕೊಟ್ಟಿರುವುದಾಗಿ ಕೆಂಗೇರಿ ಪೊಲೀಸರು ಮಾಹಿತಿ ನೀಡಿದರು.

ಕರೆ ಮಾಡಿ ಶುಭಾಶಯ ಹೇಳಿದ್ದೆ’

‘ಬೆಳಿಗ್ಗೆಯಷ್ಟೇ ಮಗನಿಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಹೇಳಿದ್ದೆ. ನೂರು ಕಾಲ ನಗುತಾ ಬಾಳು ಎಂದು ಆಶಿಸಿದ್ದೆ. ಹೊಸ ವರ್ಷದ ಆಚರಣೆಗೆ ರಾಂಚಿಗೇ ಬರುವುದಾಗಿ ಹೇಳಿದ್ದ. ಆದರೆ, ಸಂಜೆ ಹೊತ್ತಿಗೆ ನಮ್ಮ ಎಲ್ಲ ಖುಷಿಯೂ ಮಣ್ಣಾಗಿ ಹೋಯಿತು’ ಎಂದು ಸುರೇಶ್ ದುಃಖತಪ್ತರಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.