ADVERTISEMENT

ಮಿನಿಬಸ್ ಹರಿದು ಸವಾರ ಸಾವು

ಆಕ್ರೋಶಗೊಂಡ ಜನರಿಂದ ಮೂವರಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 3:15 IST
Last Updated 27 ಫೆಬ್ರುವರಿ 2020, 3:15 IST

ಬೆಂಗಳೂರು: ಪೀಣ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮಿನಿ ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಎಂ.ಬಿ.ರಮೇಶ್ (40) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಿಂದ ಆಕ್ರೋಶಗೊಂಡ ಸ್ಥಳೀಯರು, ಮಿನಿ ಬಸ್ಸಿನಲ್ಲಿದ್ದ ಚಾಲಕ ಸೇರಿ ಮೂವರನ್ನು ಥಳಿಸಿದ್ದಾರೆ.

‘ಫ್ಯಾಬ್ರಿಕೇಟರ್ ಕೆಲಸ ಮಾಡುತ್ತಿದ್ದ ರಮೇಶ್, ಸಂಜೆ 6.30ರ ಸುಮಾರಿಗೆ ಬೈಕ್‌ನಲ್ಲಿ ಹೊರಟಿದ್ದರು. ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿ ವೇಗವಾಗಿ ಬಂದ ಮಿನಿ ಬಸ್, ಬೈಕ್‌ಗೆ ಡಿಕ್ಕಿ ಹೊಡೆದಿತ್ತು’ ಎಂದು ಪೀಣ್ಯ ಪೊಲೀಸರು ಹೇಳಿದರು.

‘ರಸ್ತೆಯಲ್ಲಿ ಬಿದ್ದ ರಮೇಶ್ ಅವರ ತಲೆ ಮೇಲೆಯೇ ಬಸ್ಸಿನ ಚಕ್ರ ಹರಿದು ಹೋಗಿತ್ತು. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟರು. ಸ್ಥಳದಲ್ಲಿ ಸೇರಿದ್ದ 500ಕ್ಕೂ ಹೆಚ್ಚು ಜನ ಚಾಲಕ ಸೇರಿ ಮೂವರನ್ನು ಥಳಿಸಿದರು. ಸ್ಥಳಕ್ಕೆ ಹೋಗಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದರು.

ADVERTISEMENT

ಸವಾರ ಸಾವು: ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯ ಎಸ್‌.ಎಲ್‌.ವಿ ಕನ್ವೆನ್ಶನ್ ಹಾಲ್ ಬಳಿ ರಸ್ತೆ ಪಕ್ಕದ ಕಬ್ಬಿಣದ ಸರಳಿಗೆ ಬೈಕ್ ಗುದ್ದಿದ್ದರಿಂದಾಗಿ ಸವಾರ ಸಾಗರ್ (23) ಎಂಬುವರು ಮೃತಪಟ್ಟಿದ್ದಾರೆ. ಹಿಂಬದಿ ಸವಾರಚಂದ್ರಶೇಖರ್ (23) ಗಾಯಗೊಂಡಿದ್ದಾರೆ.

ಕೂಲಿ ಕಾರ್ಮಿಕ ಕೊಲೆ

ಕೂಲಿ ಕಾರ್ಮಿಕನನ್ನು ಕೊಲೆ ಮಾಡಿದ ಘಟನೆ ಬುಧವಾರ ಬೆಳಿಗ್ಗೆ ಸಿಟಿ ಮಾರುಕಟ್ಟೆಯಲ್ಲಿ ನಡೆದಿದೆ.

ಕಾಟನ್‌ಪೇಟೆಯ ಭಕ್ಷಿಗಾರ್ಡನ್‌ ನಿವಾಸಿ ರಮೇಶ್‌ (24) ಕೊಲೆಯಾದ ವ್ಯಕ್ತಿ. 3–4 ವರ್ಷಗಳಿಂದ ರಮೇಶ್‌ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಮಾರ್ಕೆಟ್‌ಗೆ ಬಂದಿದ್ದ ದುಷ್ಕರ್ಮಿಗಳು ರಮೇಶ್‌ ಜೊತೆ ಜಗಳ ಮಾಡಿದ್ದಾರೆ. ಬಳಿಕ, ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ಗೊತ್ತಾಗಿದೆ.

ಸ್ಥಳದಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಸಾವು ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಸಿಟಿ ಮಾರ್ಕೆಟ್‌ ‍ಪೊಲೀಸರು ಪರಿಶೀಲನೆ ನಡೆಸಿದರು. ಹಳೆ ದ್ವೇಷದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

2–3 ದಿನಗಳ ಹಿಂದೆ ಕೆಲವರ ಜೊತೆ ರಮೇಶ್ ಜಗಳವಾಡಿದ್ದರು. ಯಾರ ಜೊತೆ ಜಗಳ ನಡೆದಿತ್ತು, ಅದೇ ಕೊಲೆಗೆ ಕಾರಣವಾಗಿರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.