
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ದುಶ್ಚಟಗಳಿಗೆ ಹಣ ಹೊಂದಿಸಲು ರಸ್ತೆಯಲ್ಲಿ ತೆರಳುವ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಐವರನ್ನು ಕೆಂಗೇರಿ ಠಾಣೆಯ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಬನ್ನೇರುಘಟ್ಟದ ಶಿಕೆಪಾಳ್ಯ ಸಾಯಿ ಲೇಔಟ್‌ನ ಆರ್.ವಿಘ್ನೇಶ್ (29), ಕೋಣನಕುಂಟೆಯ ಕೆ. ಹೇಮಂತ್ (23), ಕೆಂಗೇರಿ ಕೃಷ್ಣಗಾರ್ಡನ್ ನಿವಾಸಿ ಎಸ್.ಬಾಲಾಜಿ (21), ಆರ್.ಆರ್. ನಗರದ ಕೆ.ಆರ್.ಪ್ರಜ್ವಲ್ (23), ಪಟ್ಟಣಗೆರೆಯ ವಿಶಾಲ್ ಮೂರ್ತಿ (23) ಬಂಧಿತರು.
‘ಆರೋಪಿಗಳಿಗೆ ಮದ್ಯಪಾನ ಸೇರಿದಂತೆ ಇತರೆ ದುಶ್ಚಟಗಳಿದ್ದವು. ಈ ದುಶ್ಚಟಗಳಿಗೆ ಹಣ ಹೊಂದಿಸಲು ಗುಂಪು ಕಟ್ಟಿಕೊಂಡು ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಣ, ದ್ವಿಚಕ್ರ ವಾಹನ, ಮೊಬೈಲ್ ಫೋನ್ ದೋಚಿ ಪರಾರಿ ಆಗುತ್ತಿದ್ದರು. ಆರೋಪಿಗಳ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಹಾಗೂ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸರು ಹೇಳಿದರು.
‘ನ.16ರಂದು ರಾತ್ರಿ 11.45ರ ಸುಮಾರಿಗೆ ಠಾಣಾ ವ್ಯಾಪ್ತಿಯ ಗ್ಲೋಬಲ್ ವಿಲೇಜ್ ಹಿಂಭಾಗದ ಗೇಟ್ ಸಮೀಪ ನಿಂತಿದ್ದ ನಂದೀಶ್‌ಕುಮಾರ್ ಹಾಗೂ ಪುರುಷೋತ್ತಮ್ ಅವರ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದರು. ನ.17ರ ಮುಂಜಾನೆ ನಿಖಿಲ್ ಜಿ. ಗೌಡ ಅವರ ಮೊಬೈಲ್ ಹಾಗೂ ದ್ವಿಚಕ್ರ ವಾಹನ ಕಸಿದುಕೊಂಡು ಆರೋಪಿಗಳು ಪರಾರಿ ಆಗಿದ್ದರು. ಅಂದೇ ಮಧ್ಯಾಹ್ನ 12ರ ಸುಮಾರಿಗೆ ಇದೇ ತಂಡವು ಹರಿಪ್ರಸಾದ್ ಅವರ ಮೊಬೈಲ್ ಸುಲಿಗೆ ಮಾಡಿಕೊಂಡು ಪರಾರಿ ಆಗಿತ್ತು’ ಎಂದು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.