ಬೆಂಗಳೂರು: ಆಚಾರ್ಯ ಕಾಲೇಜಿಗೆ ಹುಸಿ ಬಾಂಬ್ ಬೆದರಿಕೆಯ ಇ–ಮೇಲ್ ಸಂದೇಶ ಬಂದಿದ್ದು, ಆರೋಪಿ ಪತ್ತೆಗೆ ಸೋಲದೇವನಹಳ್ಳಿ ಠಾಣೆಯ ಪೊಲೀಸರು ಶೋಧ ಆರಂಭಿಸಿದ್ಧಾರೆ.
ಕಾಲೇಜಿನ ಆಡಳಿತ ಮಂಡಳಿಯವರು ನೀಡಿದ ದೂರು ಆಧರಿಸಿ ಏಪ್ರಿಲ್ 22ರಂದು ಸೋಲದೇವನಹಳ್ಳಿ ಠಾಣೆಯ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಸಿಜೆಎಂ ನ್ಯಾಯಾಲಯದ ಸೂಚನೆ ಮೇರೆಗೆ ಈಗ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂಬುದು ಗೊತ್ತಾಗಿದೆ.
ಇ–ಮೇಲ್‌ನಲ್ಲಿ ಏನಿತ್ತು?: ‘ಏಪ್ರಿಲ್ 22ರಂದು ಆಚಾರ್ಯ ಕಾಲೇಜಿನ ಅಧಿಕೃತ ಇ–ಮೇಲ್ ಐ.ಡಿಗೆ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿದ್ದ. ಕಾಲೇಜು ಆವರಣದಲ್ಲಿ ಬಾಂಬ್ ಇಡಲಾಗಿದೆ. ಅದು ಸ್ಫೋಟಗೊಳ್ಳಲಿದೆ. ಪ್ರಾಂಶುಪಾಲರನ್ನು ಕತ್ತರಿಸಿ ದೇಹವನ್ನು ಫ್ರಿಜ್‌ನಲ್ಲಿ ಇಡಲಾಗುವುದು ಎಂದು ಇ–ಮೇಲ್‌ನಲ್ಲಿ ಬರೆಯಲಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕಾಲೇಜು ಆಡಳಿತ ಮಂಡಳಿಯವರು ನೀಡಿದ ಮಾಹಿತಿ ಮೇರೆಗೆ ಅಂದೇ ಕಾಲೇಜು ಆವರಣಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿತ್ತು. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯೂ ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಬೆದರಿಕೆ ಸಂದೇಶ ಹೊತ್ತು ತಂದಿದ್ದ ಇ–ಮೇಲ್ ಅನ್ನು ತಾಂತ್ರಿಕ ತಜ್ಞರು ಪರಿಶೀಲಿಸುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.