ADVERTISEMENT

ಅಮೆರಿಕದ ಸಂಶೋಧನಾ ಸಂಸ್ಥೆಗೆ ಅಚ್ಯುತ ಸಮಂತ ಹೆಸರು

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:18 IST
Last Updated 23 ಮೇ 2025, 16:18 IST
ಅಚ್ಯುತ ಸಮಂತ ಇಂಡಿಯಾ ಇನಿಶಿಯೇಟಿವ್ ಕನಿ ಕ್ರೆಸ್ಟ್ ಇನ್‌ಸ್ಟಿಟ್ಯೂಟ್‌ (ಎಎಸ್‌ಐಐಸಿಸಿಐ) ಅನ್ನು ನ್ಯೂಯಾರ್ಕ್‌ನಲ್ಲಿ ಉದ್ಘಾಟಿಸಲಾಯಿತು. 
ಅಚ್ಯುತ ಸಮಂತ ಇಂಡಿಯಾ ಇನಿಶಿಯೇಟಿವ್ ಕನಿ ಕ್ರೆಸ್ಟ್ ಇನ್‌ಸ್ಟಿಟ್ಯೂಟ್‌ (ಎಎಸ್‌ಐಐಸಿಸಿಐ) ಅನ್ನು ನ್ಯೂಯಾರ್ಕ್‌ನಲ್ಲಿ ಉದ್ಘಾಟಿಸಲಾಯಿತು.    

ಬೆಂಗಳೂರು: ಅಮೆರಿಕದ ನ್ಯೂಯಾರ್ಕ್ ನಗರ ವಿಶ್ವವಿದ್ಯಾಲಯದಲ್ಲಿ (ಸಿಯುಎನ್‌ವೈ–ಕನಿ) ಹೊಸದಾಗಿ ಸ್ಥಾಪಿಸಲಾದ ಸಂಶೋಧನಾ ಸಂಸ್ಥೆಗೆ ಶಿಕ್ಷಣ ತಜ್ಞ ಅಚ್ಯುತ ಸಮಂತ ಅವರ ಹೆಸರನ್ನು ಇಡಲಾಗಿದೆ ಎಂದು ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್‌ ಟೆಕ್ನಾಲಜಿ (ಕೆಐಐಟಿ) ತಿಳಿಸಿದೆ.

ಅಚ್ಯುತ ಸಮಂತ ಇಂಡಿಯಾ ಇನಿಶಿಯೇಟಿವ್ ಕನಿ ಕ್ರೆಸ್ಟ್ ಇನ್‌ಸ್ಟಿಟ್ಯೂಟ್‌ (ಎಎಸ್‌ಐಐಸಿಸಿಐ) ಎಂದು ನಾಮಕರಣ ಮಾಡಲಾಗಿರುವ ಈ ಸಂಸ್ಥೆಯನ್ನು ಮಂಗಳವಾರ ನ್ಯೂಯಾರ್ಕ್‌ನಲ್ಲಿ ಉದ್ಘಾಟಿಸಲಾಯಿತು. ಅಮೆರಿಕದಲ್ಲಿ ಸಂಶೋಧನಾ ಸಂಸ್ಥೆಗೆ ಭಾರತೀಯರೊಬ್ಬರ ಹೆಸರಿಡಲಾಗುತ್ತಿರುವುದು ಇದೇ ಮೊದಲು. ಒಡಿಶಾದ ಕಲೆ ಮತ್ತು ಪರಂಪರೆಯ ಕುರಿತು ಅಮೆರಿಕನ್‌ ವಿದ್ಯಾರ್ಥಿಗಳು ನಡೆಸುವ ಸಂಶೋಧನೆಗೆ ಈ ಸಂಸ್ಥೆ ಬೆಂಬಲ ನೀಡಲಿದೆ. ಶಿಕ್ಷಣ ಮತ್ತು ಬುಡಕಟ್ಟು ಅಭಿವೃದ್ಧಿಯಲ್ಲಿ ಸಮಂತ ಅವರು ಮಾಡಿದ ಕೆಲಸದ ಮೇಲೆಯೂ ಬೆಳಕು ಚೆಲ್ಲಲಿದೆ ಎಂದು ಕೆಐಐಟಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಕನಿ ಅಡಿಯಲ್ಲಿ ಬರುವ ಬ್ರಾಂಕ್ಸ್ ಕಮ್ಯುನಿಟಿ ಕಾಲೇಜಿನ ಅಧ್ಯಕ್ಷ ಮಿಲ್ಟನ್ ಸ್ಯಾಂಟಿಯಾಗೊ ಅವರು ಇತ್ತೀಚೆಗೆ ಭುವನೇಶ್ವರದಲ್ಲಿರುವ ಕೆಐಐಟಿ ಮತ್ತು ಕೆಐಎಸ್‌ಎಸ್‌ ಸಂಸ್ಥೆಗಳಿಗೆ ಭೇಟಿ ನೀಡಿದ್ದಾಗ ಸಮಂತ ಅವರ ಕೆಲಸದಿಂದ ಪ್ರಭಾವಿತರಾಗಿದ್ದನ್ನು ತಿಳಿಸಿದ್ದರು. ಆನಂತರ ಸಂಶೋಧನಾ ಸಂಸ್ಥೆಗೆ ಸಮಂತ ಅವರ ಹೆಸರಿಡಲು ಸೂಚಿಸಿದ್ದರು. ಈ ಪ್ರಸ್ತಾವವನ್ನು ವಿಶ್ವವಿದ್ಯಾಲಯ ಮಂಡಳಿಯು ಅನುಮೋದಿಸಿತು ಎಂದು ತಿಳಿಸಿದೆ.

ADVERTISEMENT

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಚ್ಯುತ ಸಮಂತ ಅವರಿಗೆ ವಿಶ್ವವಿದ್ಯಾಲಯದ ಅತ್ಯುನ್ನತ ಗೌರವವಾದ ಅಧ್ಯಕ್ಷೀಯ ಪದಕ ನೀಡಿ ಗೌರವಿಸಲಾಯಿತು.

‘ಅಮೆರಿಕದ ಸಂಸ್ಥೆಗೆ ಹೆಸರು ಇಟ್ಟಿರುವ ಗೌರವವನ್ನು ಒಡಿಶಾದ ಜನರಿಗೆ, ಕೆಐಐಟಿ, ಕೆಐಎಸ್‌ಎಸ್‌ ಸಂಸ್ಥೆಗಳಿಗೆ ಸಮರ್ಪಿಸುತ್ತೇನೆ’ ಎಂದು ಅಚ್ಯುತ ಸಮಂತ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.