ADVERTISEMENT

ಆ್ಯಸಿಡ್ ಗಾಯದಿಂದ ಆರೋಪಿ ಸುಳಿವು: 16 ದಿನಗಳ ಬಳಿಕ ಸಿಕ್ಕಿಬಿದ್ದ ನಾಗೇಶ್ ಬಾಬು

ಕೃತ್ಯ ನಡೆದ 16 ದಿನಗಳ ಬಳಿಕ ಸಿಕ್ಕಿಬಿದ್ದ ನಾಗೇಶ್ ಬಾಬು

​ಪ್ರಜಾವಾಣಿ ವಾರ್ತೆ
Published 14 ಮೇ 2022, 20:00 IST
Last Updated 14 ಮೇ 2022, 20:00 IST
ಗುಂಡೇಟಿಯಿಂದ ಗಾಯಗೊಂಡಿರುವ ಆರೋಪಿ ನಾಗೇಶ್
ಗುಂಡೇಟಿಯಿಂದ ಗಾಯಗೊಂಡಿರುವ ಆರೋಪಿ ನಾಗೇಶ್   

ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ ಬಾಬು (30), ಕೈಯಲ್ಲಿ ಆ್ಯಸಿಡ್‌ನಿಂದಾಗಿ ಆಗಿದ್ದ ಗಾಯದಿಂದಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

‘ಆರೋಪಿ ಪತ್ತೆಗೆ 10 ವಿಶೇಷ ತಂಡ ರಚಿಸಲಾಗಿತ್ತು. ಘಟನೆ ನಡೆದು 16 ದಿನಗಳ ಬಳಿ ಆರೋಪಿ ಸಿಕ್ಕಿಬಿದ್ದಿದ್ದು,
ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿರುವ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಆರೋಪಿ ಆ್ಯಸಿಡ್ ಎರಚಿದ್ದ. ಆತನ ಬಲಗೈ ಮೇಲೂ ಆ್ಯಸಿಡ್‌ ಬಿದ್ದಿತ್ತು. ಅದೇ ಸ್ಥಿತಿಯಲ್ಲೇ ಆರೋಪಿ ನಗರದಿಂದ ಪರಾರಿಯಾಗಿದ್ದ.’

ADVERTISEMENT

‘ಕೃತ್ಯದ ನಂತರ ಶರಣಾಗಲೆಂದು ಆರೋಪಿ ನ್ಯಾಯಾಲಯಕ್ಕೆ ಹೋಗಿದ್ದ. ಆದರೆ, ವಕಾಲತ್ತು ವಹಿಸಲು ವಕೀಲರು ಒಪ್ಪಿರಲಿಲ್ಲ. ಆಗ, ಆಟೊದಲ್ಲಿ ಹೊಸಕೋಟೆಗೆ ಆರೋಪಿ ಹೋಗಿದ್ದ. ಅಲ್ಲಿಂದ ತಿರುಪತಿಗೆ ಹೋಗಲೆಂದು ಬಸ್‌ ಹತ್ತಿದ್ದ. ತಿರುಪತಿ ಬೇಡವೆಂದು ಮಾಲೂರಿನಲ್ಲೇ ಇಳಿದಿದ್ದ. ತಮಿಳುನಾಡು ಬಸ್‌ ಹತ್ತಿ, ತಿರುವಣ್ಣಾಮಲೈಗೆ ಹೋಗಿದ್ದ’ ಎಂದೂ ತಿಳಿಸಿದರು.

‘ಅನಾಥನೆಂದು ಹೇಳಿಕೊಂಡಿದ್ದ ಆರೋಪಿ, ಹೊಸೂರಿನ ನಿವಾಸಿಯೆಂದು ಹೆಸರು ನಮೂದಿಸಿ ಶಿವ ದೇವಸ್ಥಾನದ ಆಶ್ರಮಕ್ಕೆ ಸೇರಿದ್ದ. ಅಲ್ಲಿಯೇ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದ. ಸ್ವಾಮೀಜಿ ರೀತಿಯಲ್ಲಿ ಬಟ್ಟೆ ಹಾಕಿಕೊಂಡು, ನಿತ್ಯವೂ ಧ್ಯಾನ ಮಾಡಲಾರಂಭಿಸಿದ್ದ’ ಎಂದೂ ಹೇಳಿದರು.

ಗಾರ್ಮೇಂಟ್ಸ್ ಕಾರ್ಖಾನೆ ನೌಕರ ನೀಡಿದ್ದ ಮಾಹಿತಿ: ‘ಆಶ್ರಮದಲ್ಲಿದ್ದ ನಾಗೇಶ್‌ನನ್ನು ಸ್ಥಳೀಯರು ಸ್ವಾಮೀಜಿ ಎಂದೇ ತಿಳಿದಿದ್ದರು. ಪರಾರಿಯಾಗಿದ್ದ ನಾಗೇಶ್‌ನ ಫೋಟೊ ಸಮೇತ ಎಲ್ಲ ಭಾಷೆಗಳಲ್ಲಿ ಕರಪತ್ರಗಳನ್ನು ಮುದ್ರಿಸಿ ಹಂಚಿದ್ದೆವು. ಕರಪತ್ರ ನೋಡಿದ್ದ ತಿರುವಣ್ಣಾಮಲೈನ ಗಾರ್ಮೇಂಟ್ಸ್ ಕಾರ್ಖಾನೆಯೊಂದರ ನೌಕರ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಕರೆ ಮಾಡಿದ್ದರು. ‘ಕರಪತ್ರದಲ್ಲಿರುವ ವ್ಯಕ್ತಿಗೆ ಹೋಲಿಕೆಯಾಗುವ ಸ್ವಾಮೀಜಿಯೊಬ್ಬರು ಇಲ್ಲಿದ್ದಾರೆ’ ಎಂಬ ಮಾಹಿತಿ ನೀಡಿದ್ದರು’ ಎಂದು ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ಭಕ್ತರ ವೇಷದಲ್ಲಿ ಆಶ್ರಮಕ್ಕೆ ಹೋಗಿದ್ದ ಪೊಲೀಸರು, ಆರಂಭದಲ್ಲಿ ನಾಗೇಶ್ ಮೇಲೆ ನಿಗಾ ವಹಿಸಿದ್ದರು. ಆತನ ಜೊತೆಯಲ್ಲೇ ಧ್ಯಾನ ಹಾಗೂ ಜಪ ಸಹ ಮಾಡಿದ್ದರು. ಆತನ ಕೈ ಮೇಲಿದ್ದ ಗಾಯವನ್ನು ಗಮನಿಸಿ ಖಾತ್ರಿಪಡಿಸಿಕೊಂಡಿದ್ದರು. ನಂತರವೇ, ನಾಗೇಶ್‌ನನ್ನು ಬಂಧಿಸಿದ್ದರು. ಇದಕ್ಕೆ ಕೆಲ ಸ್ಥಳೀಯರು ವಿರೋಧಿಸಿದ್ದರು. ಆ್ಯಸಿಡ್ ಪ್ರಕರಣದ ಬಗ್ಗೆ ತಿಳಿಸಿದಾಗ, ಎಲ್ಲರೂ ಸಹಕರಿಸಿದರು’ ಎಂದೂ ಹೇಳಿದರು.

ಆತ್ಮಹತ್ಯೆಗೂ ತೀರ್ಮಾನ: ‘ಕೃತ್ಯ ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿ ತೀರ್ಮಾನಿಸಿದ್ದ. ಹೊಸಕೋಟೆ
ಕೆರೆ ಬಳಿ ಹೋಗಿದ್ದ. ಅಲ್ಲಿಯೇ ಕೆಲ ಹೊತ್ತು ಕುಳಿತುಕೊಂಡಿದ್ದ. ತೀರ್ಮಾನ ಬದಲಿಸಿ, ಅಲ್ಲಿಂದ ಹೊರಟಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕಂಪನಿ ಹೆಸರಿನಲ್ಲಿ ಆ್ಯಸಿಡ್ ಖರೀದಿ’

‘ಕಂಪನಿಯೊಂದರ ಲೇಟರ್ ಹೆಡ್‌ ಬಳಸಿಕೊಂಡು ಏಪ್ರಿಲ್ 20ರಂದೇ ಆರೋಪಿ ನಾಗೇಶ್, ಆ್ಯಸಿಡ್ ಖರೀದಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಏ‍ಪ್ರಿಲ್ 27ರಂದು ರಾತ್ರಿ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿದ್ದ ಆರೋಪಿ, ‘ನನ್ನನ್ನು ಪ್ರೀತಿಸು. ಇಲ್ಲದಿದ್ದರೆ, ಆ್ಯಸಿಡ್ ಹಾಕುತ್ತೇನೆ’ ಎಂದು ಬೆದರಿಸಿದ್ದ. ತಪ್ಪಿಸಿಕೊಂಡು ಹೋಗಿದ್ದ ಯುವತಿ, ತಂದೆಗೆ ವಿಷಯ ತಿಳಿಸಿದ್ದರು. ನಾಗೇಶ್‌ನ ಸಹೋದರನಿಗೆ ಕರೆ ಮಾಡಿದ್ದ ತಂದೆ, ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ನೀಡುವಂತೆ ಹೇಳಿದ್ದರು.’

‘ನಾಗೇಶ್‌ನಿಗೆ ಬುದ್ಧಿ ಹೇಳಿದ್ದ ಸಹೋದರ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿ, ಆ್ಯಸಿಡ್ ಹಾಕಿಯೇ ತೀರುತ್ತೇನೆಂದು ಕೂಗಾಡಿದ್ದ. ಏಪ್ರಿಲ್ 28ರಂದು ಯುವತಿ ಮೇಲೆ ಆ್ಯಸಿಡ್ ಎರಚಿದ್ದ. ಈ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ತಿಳಿಸಿದರು.

‘ಕೆಲ ವರ್ಷಗಳ ಹಿಂದೆಯೂ ಆರೋಪಿ ಆ್ಯಸಿಡ್ ಖರೀದಿಸಿದ್ದ ಬಗ್ಗೆ ಮಾಹಿತಿ ಇದೆ. ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.