ADVERTISEMENT

ಆ್ಯಸಿಡ್ ದಾಳಿ: ಆರೋಪಿ ಸಮೇತ ಮಹಜರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 19:39 IST
Last Updated 4 ಜೂನ್ 2022, 19:39 IST

ಬೆಂಗಳೂರು: 24 ವರ್ಷದ ಯುವತಿ ಮೇಲೆ ಆ್ಯಸಿಡ್ ಎರಚಿದ್ದ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಘಟನಾ ಸ್ಥಳದಲ್ಲಿ ಶನಿವಾರ ಮಹಜರು ಪ್ರಕ್ರಿಯೆ ನಡೆಸಿದರು.

ಪ್ರಕರಣದಡಿ ಬಂಧಿಸಲಾಗಿರುವ ಆರೋಪಿ ನಾಗೇಶ್ ಬಾಬು (30) ಸಮೇತ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು, ಕೃತ್ಯದ ಬಗ್ಗೆ ಆತನಿಂದಲೇ ಮಾಹಿತಿ ಪಡೆದುಕೊಂಡರು. ಘಟನೆಯನ್ನು ಮರು ಸೃಷ್ಟಿಸಿ ವಿಡಿಯೊ ಚಿತ್ರೀಕರಣ ಮಾಡಿಕೊಂಡರು.

‘ಸುಂಕದಕಟ್ಟೆ ಬಳಿಯ ಫೈನಾನ್ಸ್ ಕಂಪನಿಯೊಂದರ ಕಚೇರಿ ಬಳಿ ಏಪ್ರಿಲ್ 28ರಂದು ಯುವತಿ ಹೊರಟಿದ್ದರು. ತನ್ನನ್ನು ಪ್ರೀತಿಸಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡಿದ್ದ ಆರೋಪಿ, ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡಿನ ಆಶ್ರಮವೊಂದರಲ್ಲಿ ಆರೋಪಿ ಸಿಕ್ಕಿಬಿದ್ದಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮೇ 14ರಂದು ನಗರಕ್ಕೆ ಕರೆತರುವ ವೇಳೆಯಲ್ಲಿ ಆರೋಪಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆತನ ಬಲಗಾಲಿಗೆ ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್‌ ಗುಂಡು ಹೊಡೆದು ಬಂಧಿಸಿದ್ದರು. ಅಂದಿನಿಂದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ, ವೈದ್ಯರ ಸಲಹೆಯಂತೆ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಲಾಯಿತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.