ADVERTISEMENT

ಸಚಿವ ಜಮೀರ್ ಅಹಮದ್ ಅನರ್ಹತೆ ಅರ್ಜಿ: ವಿಚಾರಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 15:26 IST
Last Updated 14 ಸೆಪ್ಟೆಂಬರ್ 2023, 15:26 IST
ಜಮೀರ್ ಅಹಮದ್ ಖಾನ್ 
ಜಮೀರ್ ಅಹಮದ್ ಖಾನ್    

ಬೆಂಗಳೂರು: ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಶಾಸಕರಾಗಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ತಕರಾರು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಹೈಕೋರ್ಟ್ ಮುಂದೂಡಿದೆ.

‘ಉಚಿತ ಗ್ಯಾರಂಟಿಗಳ ಆಮಿಷವೊಡ್ಡುವ ಮೂಲಕ ಜಮೀರ್ ಅವರು ಚುನಾವಣಾ ಅಕ್ರಮ ಎಸಗಿದ್ದಾರೆ. ಅವರನ್ನು ಅನರ್ಹಗೊಳಿಸಬೇಕು ಎಂದು ಚಾಮರಾಜಪೇಟೆ ನಿವಾಸಿ ಶಶಾಂಕ್‌ ಜೆ. ಶ್ರೀಧರ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ವಾದ ಆಲಿಸಿದ ನ್ಯಾಯಪೀಠ, ಚುನಾವಣಾ ತಕರಾರು ಅರ್ಜಿಯ ಸಂಪೂರ್ಣ ದಾಖಲೆಗಳ ಪ್ರತಿಗಳನ್ನು ಪ್ರತಿವಾದಿಗಳ ಪರ ವಕೀಲರಿಗೆ ನೀಡಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು. ಇದೇ ವೇಳೆ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಬೇಕಾಗಿದ್ದು, ಅದಕ್ಕೆೆ ಸಮಯ ಬೇಕು ಎಂದು ಜಮೀರ್ ಪರ ವಕೀಲರು ಕೋರಿದರು. ವಿಚಾರಣೆಯನ್ನು ಮುಂದೂಡಿದ ನ್ಯಾಯಪೀಠ, ಮುಂದಿನ ವಿಚಾರಣಾ ದಿನಾಂಕದೊಳಗೆ ಲಿಖಿತ ಆಕ್ಷೇಪಣಿಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳ ಪರ ವಕೀಲರಿಗೆ ಸೂಚಿಸಿತು.

ADVERTISEMENT

ಪಕ್ಷದ ಪ್ರಣಾಳಿಕೆಯಲ್ಲಿನ ಐದು ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಕಾಂಗ್ರೆೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಅದೇ ರೀತಿ ಜಮೀರ್ ಅಹಮದ್‌ ಕೂಡಾ ಆಯ್ಕೆಯಾಗಿದ್ದಾರೆ. ಇದು ಚುನಾವಣಾ ಅಕ್ರಮಕ್ಕೆೆ ಸಮಾನಾಗಿದೆ. ಆದ್ದರಿಂದ, ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂಬುದು ಅರ್ಜಿದಾರರ ವಾದ. ಅರ್ಜಿದಾರರ ಪರ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.