ADVERTISEMENT

ಕಲಾಪ ಅನಿರ್ದಿಷ್ಟ ಅವಧಿಗೆ ಮುಂದೂಡಿಕೆ

ಗೋಹತ್ಯೆ ನಿಷೇಧಕ್ಕಾಗಿ ಸುಗ್ರೀವಾಜ್ಞೆಯೋ, ಅಧಿವೇಶನವೋ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 20:30 IST
Last Updated 10 ಡಿಸೆಂಬರ್ 2020, 20:30 IST

ಬೆಂಗಳೂರು: ಕೇವಲ ನಾಲ್ಕು ದಿನಗಳು ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಕಲಾಪವನ್ನು ಗುರುವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

ಈ ಬಾರಿ ವಿಧಾನಸಭೆಯಲ್ಲಿ ಪ್ರಮುಖವಾಗಿ ಗೋಹತ್ಯೆ ನಿಷೇಧ ಮಸೂದೆ, ಬಿಬಿಎಂಪಿ ಮಸೂದೆ, ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ ಅಂಗೀಕಾರಗೊಂಡವು. ವಿಧಾನಪರಿಷತ್ತಿನಲ್ಲಿ ಎಪಿಎಂಸಿ ತಿದ್ದುಪಡಿ ಮಸೂದೆ ಮತ್ತು ಭೂಸುಧಾರಣಾ ತಿದ್ದುಪಡಿ ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿತು. ಇವೆರಡಕ್ಕೂ ಜೆಡಿಎಸ್‌ ಬೆಂಬಲ ವ್ಯಕ್ತಪಡಿಸಿತ್ತು. ಆದರೆ, ಪರಿಷತ್ತಿನಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಯಾಗಲಿಲ್ಲ.

ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದಿಟ್ಟುಕೊಂಡು ಮತಗಳಿಕೆಯ ಲೆಕ್ಕಾಚಾರ ಹಾಕಿರುವ ಆಡಳಿತಾರೂಢ ಬಿಜೆಪಿ, ಗೋಹತ್ಯೆ ನಿಷೇಧ ಮಸೂದೆಯನ್ನು ತಂದೇ ತೀರುವ ಚಿಂತನೆ ನಡೆಸಿದೆ.

ADVERTISEMENT

ಕಲಾಪ ಅನಿರ್ದಿಷ್ಟ ಅವಧಿಗೆ ಮತ್ತೆ ಮುಂದೂಡಿರುವುದರಿಂದಾಗಿ ಪರಿಷತ್ತಿನಲ್ಲಿ ಈ ಮಸೂದೆಗೆ ಅಂಗೀಕಾರ ಪಡೆಯಲು ಆಗಿಲ್ಲ. ಈಗಿರುವ ದಾರಿ ಎಂದರೆ ಸುಗ್ರೀವಾಜ್ಞೆ ತರುವುದು ಅಥವಾ ರಾಜ್ಯಪಾಲರ ಅನುಮತಿ ಪಡೆದು ವಿಶೇಷ ಅಧಿವೇಶನದ ಕರೆದು ಅಂಗೀಕಾರ ಪಡೆಯುವುದು. ಗುರುವಾರವಷ್ಟೇ ಕಲಾಪ ಮುಕ್ತಾಯಗೊಂಡಿರುವುದರಿಂದ ಮತ್ತೆ ವಿಶೇಷ ಅಧಿವೇಶನ ಕರೆಯಲು ರಾಜ್ಯಪಾಲರು ಸಮ್ಮತಿಸಿದರೆ ಡಿ.15ರ ಮಂಗಳವಾರ ಅಧಿವೇಶನ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.

ಒಂದು ವೇಳೆ ರಾಜ್ಯಪಾಲರು ಒಪ್ಪಿಗೆ ನೀಡದೇ ಇದ್ದರೆ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೊಳಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.