ಬೆಂಗಳೂರು: ಏರೋ–ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ‘ಡೊಮೆಸ್ಟಿಕ್ ಪಾರ್ಕಿಂಗ್’ನಲ್ಲಿ ಶನಿವಾರ ಭೀಕರ ಅಗ್ನಿ ದುರಂತ ಸಂಭವಿಸಿ ಸುಮಾರು 300 ಕಾರುಗಳು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಫೆ.20ರಿಂದ ಪ್ರದರ್ಶನ ನಡೆಯುತ್ತಿದ್ದು, ಶನಿವಾರದಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ವಾರಾಂತ್ಯವಾದ್ದರಿಂದ ಸಾಕಷ್ಟು ಜನ ಬೆಳಿಗ್ಗೆಯಿಂದಲೇ ವಾಯುನೆಲೆಯತ್ತ ಧಾವಿಸಿದ್ದರು. ಸಾರ್ವಜನಿಕ ವಾಹನಗಳಿಗೆ ಹುಣಸಮಾರನಹಳ್ಳಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆ ವೇಳೆಗೆ ಅಲ್ಲಿ ಸಾವಿರಕ್ಕೂ ಹೆಚ್ಚು ಕಾರುಗಳು ನಿಲುಗಡೆ ಆಗಿದ್ದವು.
12.10ರ ಸುಮಾರಿಗೆ ಆ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಹೊಗೆ ಕಾಣಿಸಿಕೊಂಡಿತು. ಅದನ್ನು ನೋಡಿದ ಯುವಕನೊಬ್ಬ, ಅಲ್ಲೇ ಇದ್ದ ಪೊಲೀಸರಿಗೆ ವಿಷಯ ತಿಳಿಸಿದ. ಸ್ವಲ್ಪ ಸಮಯದಲ್ಲೇ ಒಂದು ಕಾರಿಗೆ ಧಗ್ಗನೇ ಬೆಂಕಿ ಹೊತ್ತಿಕೊಂಡಿತು. ಒಣಹುಲ್ಲು ಹಾಗೂ ಗಾಳಿಯ ರಭಸದಿಂದಾಗಿ ಅಗ್ನಿಯ ಕೆನ್ನಾಲಗೆ ಕ್ಷಣಮಾತ್ರದಲ್ಲಿ ಇಡೀ ಪ್ರದೇಶವನ್ನೇ ಆವರಿಸಿಕೊಂಡಿತು. ಒಂದೊಂದೇ ಕಾರಿಗೆ ಬೆಂಕಿ ಅಂಟಿಕೊಳ್ಳುತ್ತ, ಸಾಲಾಗಿ ನಿಲುಗಡೆಯಾಗಿದ್ದ ಸುಮಾರು 300 ವಾಹನಗಳು ಸುಟ್ಟು ಕರಕಲಾದವು.
ಸ್ಥಳಕ್ಕೆ ದೌಡಾಯಿಸಿದ ವಾಯುಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಸುಮಾರು ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
‘ಕಾರುಗಳ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಳ್ಳುತ್ತಿದ್ದ ಕಾರಣ, ಅವಶೇಷಗಳು ಬೆಂಕಿಯ ಸಮೇತ ಛಿದ್ರವಾಗುತ್ತಿದ್ದವು. ಇದರಿಂದ ಬೆಂಕಿ ಉಂಡೆಗಳು ಎಲ್ಲೆಲ್ಲಿ ಬೀಳುತ್ತಿದ್ದವೋ, ಆ ಸ್ಥಳಗಳೆಲ್ಲ ಹೊತ್ತಿ ಉರಿಯುತ್ತಿದ್ದವು’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.
ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಗೃಹಸಚಿವ ಎಂ.ಬಿ.ಪಾಟೀಲ ಅವರು ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಹಾಯವಾಣಿ ಕೇಂದ್ರ: ಕಾರುಗಳು ಗುರುತು ಸಿಗಲಾರದಂತೆ ಸುಟ್ಟು ಹೋಗಿದ್ದರಿಂದ ಮಾಲೀಕರು ಕಂಗಾಲಾಗಿದ್ದರು. ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ನಾಲ್ಕು ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಿ ಮಾಲೀಕರಿಂದ ಕಾರಿನ ನೋಂದಣಿ ಸಂಖ್ಯೆ ಮತ್ತಿತರ ವಿವರ ಪಡೆದುಕೊಂಡರು. ಯಲಹಂಕದ ಆರ್‌ಟಿಒ ಕಚೇರಿ ಭಾನುವಾರವೂ ಕಾರ್ಯಾಚರಿಸಲಿದೆ. ಕಾರಿನೊಳಗಿದ್ದ ಮೂಲ ದಾಖಲೆಗಳನ್ನು ಕಳೆದುಕೊಂಡವರಿಗೆ ಅವುಗಳ ಪ್ರತಿಗಳನ್ನು ಒದಗಿಸಲು ನೆರವಾಗಲಿದೆ. ಮಾಲೀಕರು ಕಾರಿನ ನೋಂದಣಿ ಸಂಖ್ಯೆ ಅಥವಾ ಚಾಸ್ಸಿ ಸಂಖ್ಯೆ ನೀಡಬೇಕು.
3ನೇ ದುರಂತ
ವೈಮಾನಿಕ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದ ‘ಮಿರಾಜ್–2000’ ಯುದ್ಧ ವಿಮಾನ ಇದೇ ಫೆ.1ರಂದು ಸ್ಫೋಟಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು ಏರ್–ಶೋ ಶುರುವಾಗುವ ಹಿಂದಿನ ದಿನ (ಫೆ.19) ತಾಲೀಮು ನಡೆಸುವಾಗ ‘ಸೂರ್ಯಕಿರಣ’ ವಿಮಾನ ದುರಂತಕ್ಕೀಡಾಗಿ ಪೈಲಟ್ ಪ್ರಾಣ ಕಳೆದುಕೊಂಡರು. ಈ ಘಟನೆ ಬೆನ್ನಲ್ಲೇ ಮತ್ತೊಂದು ದೊಡ್ಡ ದುರಂತ ಸಂಭವಿಸಿದೆ.
‘ಆತಂಕ ಬೇಡ’
‘ಕಾರು ಮಾಲೀಕರು ಭಾನುವಾರ ಯಲಹಂಕ ಪೊಲೀಸ್ ಠಾಣೆಗೆ ಬಂದು ದೂರು ಕೊಡಿ. ಇದೇ ವೇಳೆ ವಾಹನದ ಸಂಪೂರ್ಣ ದಾಖಲೆಗಳನ್ನೂ ಒದಗಿಸಿ. ವಿಮೆ ದೊರಕಿಸಿಕೊಡಲು ಪೊಲೀಸ್ ಇಲಾಖೆಯಿಂದಲೂ ಸಹಾಯ ಮಾಡುತ್ತೇವೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅಭಯ ನೀಡಿದರು.
ಸರ್ಕಾರ ತೆಗೆದುಕೊಂಡ ಕ್ರಮಗಳು
* ವಾಹನಗಳಿಗೆ ಸಂಬಂಧಪಟ್ಟ ವಿಮಾ ಹಕ್ಕುಗಳನ್ನು ಪರಿಶೀಲಿಸಲು ವಿಶೇಷ ತಂಡ ರಚನೆ.
* ವಾಹನದ ಜತೆ ದಾಖಲೆಗಳನ್ನೂ ಕಳೆದುಕೊಂಡಿರುವ ಮಾಲೀಕರಿಗೆ ಆರ್. ಸಿ ಬುಕ್ ಹಾಗೂ ಚಾಲನಾ ಪರವಾನಗಿಯ ನಕಲು ಕೊಡುವಂತೆ ಸಾರಿಗೆ ಇಲಾಖೆಗೆ ಸೂಚನೆ.
* ಅನುಕಂಪದ ಆಧಾರದ ಮೇಲೆ ವಾಹನಗಳ ವಿಮಾ ಹಕ್ಕುಗಳನ್ನು ಪರಿಹರಿಸಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ.
* ಭಾನುವಾರದ ಪ್ರದರ್ಶನಕ್ಕೆ ಬರುವವರಿಗೆ ವಾಹನಗಳ ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ.
ಸಹಾಯವಾಣಿ 080–29729908
080–29729909
94498–64050
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.