ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ ಪೂರ್ವಭಾವಿಯಾಗಿ ಭಾನುವಾರ ಲಘು ಯುದ್ಧ ವಿಮಾನ ತೇಜಸ್ ಎಂಕೆ–1ಎನಲ್ಲಿ ಹಾರಾಟ ನಡೆಸಿದರು. ಅದಕ್ಕೂ ಮುನ್ನ ವಿಮಾನದ ಮೇಲೆ ನಿಂತು ಚಿತ್ರ ತೆಗೆಸಿಕೊಂಡರು.
ಬೆಂಗಳೂರು: ನೋಡುಗರ ಹೃದಯಬಡಿತ ಹೆಚ್ಚಿಸುವ ವೈಮಾನಿಕ ಕಸರತ್ತು, ವೈಮಾನಿಕ ಮತ್ತು ಬಾಹ್ಯಾಕಾಶ ಉದ್ದಿಮೆ, ಉದ್ಯಮಿಗಳ ಮುಖಾಮುಖಿಗೆ ವೇದಿಕೆ ಆಗಲಿರುವ ದೇಶದ ಬೃಹತ್ ವೈಮಾನಿಕ ಪ್ರದರ್ಶನ, ‘ಏರೊ ಇಂಡಿಯಾ–2025’ ಸೋಮವಾರ ಆರಂಭವಾಗಲಿದೆ.
ಬೆಂಗಳೂರು ಏರ್ ಷೋ ಎಂದೇ ಖ್ಯಾತವಾಗಿರುವ ವೈಮಾನಿಕ ಪ್ರದರ್ಶನದ 15ನೇ ಆವೃತ್ತಿ ಎಲ್ಲ ರೀತಿಯಲ್ಲೂ ಹಿಂದೆಂದಿಗಿಂತ ದೊಡ್ಡದಾಗಿ ಇರಲಿದೆ. ಯಲಹಂಕದಲ್ಲಿ ಇರುವ ವಾಯುಪಡೆಯ ವಿಶಾಲ ಮೈದಾನದಲ್ಲಿ ಪ್ರದರ್ಶನಕ್ಕೆ ಎಲ್ಲ ಸಿದ್ಧತೆಗಳೂ ಅಂತಿಮವಾಗಿವೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೈಮಾನಿಕ ಪ್ರದರ್ಶನದ ರೂಪುರೇಷೆಗಳ ಮಾಹಿತಿ ನೀಡಿದರು. ‘ಇದು ಕೇವಲ ತಂತ್ರಜ್ಞಾನ–ಕೌಶಲ ತೋರಿಸಲು ಇರುವ ಪ್ರದರ್ಶನವಲ್ಲ. ಬದಲಿಗೆ ಕೋಟ್ಯಂತರ ಯುವಮನಸುಗಳಲ್ಲಿ ಸ್ಫೂರ್ತಿಯ ಸೆಲೆ ಬಿತ್ತುವ ವೇದಿಕೆ ಆಗಲಿದೆ’ ಎಂದರು.
‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ, ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತವು ಸ್ವಾಲಂಬನೆ ಸಾಧಿಸುತ್ತಿರುವುದರ ಪ್ರತೀಕವಾಗಿ ಈ ಪ್ರದರ್ಶನ ನಿಲ್ಲಲಿದೆ. ಹೆಸರಾಂತ ಜಾಗತಿಕ ಉದ್ಯಮಗಳ ನೂರಕ್ಕೂ ಹೆಚ್ಚು ಸಿಇಒಗಳು ಭಾಗಿಯಾಗಲಿದ್ದಾರೆ. ಬೆಂಗಳೂರಿನಂತಹ ವೈಮಾನಿಕ, ಬಾಹ್ಯಾಕಾಶ ಸಂಶೋಧನೆ ಮತ್ತು ನವೋದ್ಯಮಗಳ ಕೇಂದ್ರದಲ್ಲಿ ಹೂಡಿಕೆ ಸಾಧ್ಯತೆಗಳ ಬಗ್ಗೆ ಮಾತುಕತೆಗಳಿಗೆ ಇದು ವೇದಿಕೆಯಾಗಲಿದೆ’ ಎಂದರು.
‘ರಕ್ಷಣಾ ಪರಿಕರ ಮತ್ತು ಉಪಕರಣಗಳ ಕ್ಷೇತ್ರದಲ್ಲಿ ನಾವು ಅತಿಹೆಚ್ಚು ಆಮದು ಮಾಡಿಕೊಳ್ಳುವ ದೇಶವೆನಿಸಿದ್ದೇವೆ. ಇದು ಹೆಮ್ಮೆಯ ವಿಚಾರವಲ್ಲ. ಆದರೆ ಪ್ರತಿವರ್ಷ ಆಮದು ಪ್ರಮಾಣ ಇಳಿಕೆಯಾಗುತ್ತಿದೆ. ಜತೆಗೆ ರಕ್ಷಣಾ ಪರಿಕರಗಳ ರಫ್ತು ಏರಿಕೆಯಾಗುತ್ತಿದೆ. 2025–26ನೇ ಸಾಲಿನಲ್ಲಿ ಈ ರಫ್ತು ಮೊತ್ತ ₹30,000 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಇಂತಹ ವಹಿವಾಟಿಗೆ ಪೂರಕವಾಗಿ ಪ್ರಾತ್ಯಕ್ಷಿಕೆ ಮತ್ತು ಮಾತುಕತೆ ವೈಮಾನಿಕ ಪ್ರದರ್ಶನವು ಅವಕಾಶ ಮಾಡಿಕೊಡಲಿದೆ’ ಎಂದರು.
ಕಾರ್ಯಕ್ರಮ ವಿವರ
ಫೆ.10; ಉದ್ಘಾಟನೆ ವೈಮಾನಿಕ ಪ್ರದರ್ಶನ ವಿಚಾರ ಸಂಕಿರಣ
ಫೆ.11; ಯುದ್ಧ ವಿಮಾನಗಳ ಪ್ರದರ್ಶನ ವಿವಿಧ ದೇಶಗಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ರಕ್ಷಣಾ ಸಚಿವರ ಸಭೆ ಸಿಇಒಗಳ ಸಭೆ
ಫೆ.12; ಸಿಇಒ ನವೋದ್ಯಮಿ ಮತ್ತು ಉದ್ಯಮಿಗಳ ಮುಖಾಮುಖಿ ಮಾತುಕತೆ ವಿಚಾರ ಸಂಕಿರಣ ಸಮಾರೋಪ
ಫೆ.13–14; ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ
ಹಿಂದೆಂದಿಗಿಂತ ದೊಡ್ಡ ಶೋ
42,438 ಚದರ ಮೀಟರ್ (35,000 ಚ.ಮೀ)ಏರೊ ಇಂಡಿಯಾ ನಡೆಯಲಿರುವ ಪ್ರದೇಶದ ವಿಸ್ತೀರ್ಣ
7+ ಲಕ್ಷ (7 ಲಕ್ಷ)ಮಂದಿ ಭೇಟಿ ನೀಡುವ ನಿರೀಕ್ಷೆ 70+ (67)ವೈಮಾನಿಕ ಕಸರತ್ತುಗಳು 30+ (23)ವೈಮಾನಿಕ ಸ್ಥಿರ ಪ್ರದರ್ಶನ 900+ (809)ಪ್ರದರ್ಶನ ಮಳಿಗೆಗಳ ಸಂಖ್ಯೆ 80 ದೇಶಗಳ ರಕ್ಷಣಾ ಇಲಾಖೆ ಅಧಿಕಾರಿಗಳು ಭಾಗಿ 26 ದೇಶಗಳ ರಕ್ಷಣಾ ಸಚಿವರು ಭಾಗಿ 100+ ಕಂಪನಿಗಳ ಸಿಇಒಗಳು ಭಾಗಿಯಾಗುವ ನಿರೀಕ್ಷೆ * ಆವರಣದಲ್ಲಿ ಇರುವುದು 2023ರ ಏರೊ ಇಂಡಿಯಾದ ವಿವರಗಳು
ಆಕರ್ಷಣೆಗಳು
* ಸೂರ್ಯಕಿರಣ್ ತಂಡದ ವೈಮಾನಿಕ ಕಸರತ್ತು
* ಎಲ್‌ಸಿಎ ತೇಜಸ್ ಎಂಕೆ–1ಎ ಎಚ್‌ಎಲ್ ನಿರ್ಮಿತ ಎಚ್‌ಟಿಟಿ–40 ತರಬೇತಿ ವಿಮಾನ
* ಅಮೆರಿಕದ ಎಫ್–35 ಬಿ–1ಬಿ ಲ್ಯಾನ್ಸರ್ ಬಾಂಬರ್ ಡಾರ್ನಿಯರ್ ವಿಮಾನ
* ರಷ್ಯಾದ ಸುಖೋಯ್–57 5ನೇ ತಲೆಮಾರಿನ ಯುದ್ಧವಿಮಾನ
‘ತೇಜಸ್ ಪೂರೈಕೆಗೆ ಒತ್ತು’
‘ದೇಶೀಯವಾಗಿ ವಿನ್ಯಾಸ ಮಾಡಿರುವ ಅಮೆರಿಕದ ಎಂಜಿನ್ ಬಳಸುತ್ತಿರುವ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ಪೂರೈಕೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ‘ತೇಜಸ್‌ನಲ್ಲಿ ಬಳಕೆಯಾಗುತ್ತಿರುವ ಎಂಜಿನ್ ಅಮೆರಿಕದ್ದು. ಆ ಎಂಜಿನ್ ಪೂರೈಕೆ ಹೆಚ್ಚಿಸುವ ಸಂಬಂಧ ಮಾತುಕತೆ ನಡೆದಿದೆ. ನಂತರ ತಯಾರಿಕಾ ಕಾರ್ಯವೂ ಕ್ಷಿಪ್ರವಾಗಲಿದೆ. 2025–26ನೇ ಸಾಲಿನಲ್ಲಿ ತೇಜಸ್ ಪೂರೈಕೆ ಕಾಲಮಿತಿಗೆ ಬದ್ಧವಾಗಿರಲಿದ್ದೇವೆ’ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಪ್ರಶ್ನೆಗೆ ಉತ್ತರಿಸಿದರು. ಅಮೆರಿಕ ಮತ್ತು ರಷ್ಯಾದ 5ನೇ ತಲೆಮಾರಿನ ಯುದ್ಧವಿಮಾನಗಳು ಪ್ರದರ್ಶನದಲ್ಲಿ ಭಾಗಿಯಾಗಲಿವೆ. ಅವುಗಳ ಖರೀದಿ ಸಂಬಂಧ ಮಾತುಕತೆ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.