ಬೆಂಗಳೂರು: ಏರೊ ಇಂಡಿಯಾ 15ನೇ ಆವೃತ್ತಿಯು ಯಲಹಂಕ ವಾಯುನೆಲೆಯಲ್ಲಿ ಆರಂಭವಾಗಿದ್ದು, ಪ್ರಮುಖ ಕೇಂದ್ರಬಿಂದುವಾದ ವೈಮಾನಿಕ ಪ್ರದರ್ಶನವು ಕಳೆದ ಹತ್ತು ವರ್ಷಗಳ ಹಿಂದಿನ ವಿಜೃಂಭಣೆಗೆ ಹೋಲಿಸಿದರೆ ಈ ಬಾರಿ ರಂಗು ಕಳೆದುಕೊಂಡಿದೆ.
ಭಾರತೀಯ ವಾಯು ಸೇನೆಯ ತಂಡವು ಎಚ್‌ಎಎಲ್ ನಿರ್ಮಿತ ಹೆಲಿಕಾಪ್ಟರ್‌ಗಳನ್ನು ಬಳಸಿ ಸಾರಂಗ ತಂಡದಿಂದ ಮೈ ಜುಂ ಎನಿಸುವ ರೋಮಾಂಚನಕಾರಿ ಪ್ರದರ್ಶನ, ಯುರೋಪಿಯನ್ ಏರೊಬ್ಯಾಟಿಕ್ ತಂಡದ ಫ್ಲೈಯಿಂಗ್ ಬುಲ್ಸ್‌ನ ಆಕರ್ಷಕ ಕಸರತ್ತು, ಸುಖೋಯ್ ಯುದ್ಧ ವಿಮಾನಗಳು ಕಿವಿ ಗಡಚಿಕ್ಕುವ ಶಬ್ಧದೊಂದಿಗೆ ಪ್ರವೇಶ ಪಡೆದು ಮೈನವಿರೇಳಿಸುತ್ತಿದ್ದ ರಷ್ಯನ್ ನೈಟ್ಸ್ ತಂಡದ ವೈಮಾನಿಕ ಕಸರತ್ತುಗಳು ಮತ್ತು ಪ್ರತಿ ಗಂಟೆಗೆ 200 ನಾಟಿಕಲ್ಸ್ ವೇಗದಲ್ಲಿ ಸಾಗುವ ವಿಮಾನಗಳ ಮೇಲೆ ಯುವತಿಯರು ನಿಂತು ಹಾರಾಟ ನಡೆಸುವ ‘ಏಂಜೆಲ್ಸ್ ಆನ್ ವಿಂಗ್ಸ್’ ಹತ್ತು ವರ್ಷಗಳ ಹಿಂದಿನ ಏರೊ ಇಂಡಿಯಾದ ಪ್ರಮುಖ ಆಕರ್ಷಣೆಗಳಾಗಿದ್ದವು.
ಆದರೆ, 2025ರಲ್ಲಿ ಇಂಥ ಯಾವ ತಂಡಗಳೂ ಭಾಗವಹಿಸಿಲ್ಲ. ಒಂದೊಂದೇ ವಿಮಾನಗಳು ಆಗಸದಲ್ಲಿ ತಮ್ಮ ಪ್ರದರ್ಶನ ನಡೆಸುತ್ತಿವೆ. ಅಂತಿಮವಾಗಿ ಪ್ರದರ್ಶನಕ್ಕೆ ಕಳಶವಿಟ್ಟಂತೆ ಸೂರ್ಯ ಕಿರಣ್ ತಂಡದ ಕಸರತ್ತು ನೆರೆದವರ ಚಪ್ಪಾಳೆ ಗಿಟ್ಟಿಸುತ್ತಿದೆ.
ಮಧ್ಯಾಹ್ನ 12ಕ್ಕೆ ಎಚ್‌ಎಎಲ್‌ನ ಟರ್ಬೊ ಟ್ರೈನರ್ 40ಯೊಂದಿಗೆ ವೈಮಾನಿಕ ಪ್ರದರ್ಶನವು ಆರಂಭವಾಗುತ್ತದೆ. ಈ ವಿಮಾನವು ಕಡಿಮೆ ಸ್ಥಳಾವಕಾಶದಲ್ಲಿ ಶೇ 70ರಷ್ಟು ಬಾಗುವ ಸಾಮರ್ಥ್ಯ ಹೊಂದಿದ್ದು, ಸುಲಭವಾಗಿ ಲ್ಯಾಂಡಿಂಗ್ ಆಗುವುದನ್ನು ಪ್ರದರ್ಶಿಸುತ್ತಿದೆ.
ನಂತರ ತೇಜಸ್ ಲಘು ಯುದ್ಧ ವಿಮಾನದ ಮಾರ್ಕ್–1 ಆಲ್ಫಾ ತನ್ನ ಕಸರತ್ತು ಪ್ರದರ್ಶಿಸುತ್ತದೆ. ಅತ್ಯಂತ ಕಡಿಮೆ 130 ನಾಟ್ಸ್ ವೇಗದಲ್ಲಿ ಸಾಗುವ ಸಾಮರ್ಥ್ಯವಿರುವ ಈ ವಿಮಾನವು ತಲೆಕೆಳಗಾಗಿ ಸಾಗಬಲ್ಲದು. ಮುಖ್ಯ ತರಬೇತಿ ಪೈಲಟ್ ಕೆ.ಕೆ. ವೇಣುಗೋಪಾಲ್ ಅವರು ಈ ಕಸರತ್ತನ್ನು ಪ್ರದರ್ಶಿಸಿದರು. 700ರಿಂದ 900 ಮೀಟರ್ ಸ್ಥಳಾವಕಾಶದಲ್ಲಿ ಲ್ಯಾಂಡಿಂಗ್ ಸೌಕರ್ಯ ಇದರದ್ದು.
ತುಮಕೂರಿನಲ್ಲಿ ಏಷ್ಯಾದ ಅತಿ ದೊಡ್ಡ ವಿಮಾನ ತಯಾರಿಕಾ ಘಟಕ ಹೊಂದಿರುವ ಎಚ್‌ಎಎಲ್ ನಿರ್ಮಿಸಿರುವ ಎಲಿವೇಟ್ ಹೆಲಿಕಾಪ್ಟರ್ ತನ್ನ ಕಸರತ್ತು ಪ್ರದರ್ಶನ ಆರಂಭಿಸುತ್ತದೆ. ಸೇನೆ ಮತ್ತು ನಾಗರಿಕ ಬಳಕೆಗೆ ಯೋಗ್ಯವಾಗುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಅವಳಿ ಎಂಜಿನ್ ಹೊಂದಿರುವ ಇದು ಸಿಯಾಚಿನ್‌ನಂತಹ ದುರ್ಗಮ ಕಣಿವೆ ಪ್ರದೇಶದಲ್ಲೂ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಮುಂದಕ್ಕೆ ಮಾತ್ರವಲ್ಲ, ಹಿಮ್ಮುಖವಾಗಿಯೂ ಹಾರಾಟ ನಡೆಸುವ ಇದರ ಸಾಮರ್ಥ್ಯವನ್ನು ನಿವೃತ್ತ ಪೈಲಟ್ ಎಸ್.ಪಿ.ಜಾನ್ ಪ್ರದರ್ಶಿಸಿದರು.
ಅಮೆರಿಕದ ಬೋಯಿಂಗ್ ಕಂಪನಿಯ ಕೆಸಿ 135 ಯುಎಸ್‌ಎ ವಿಮಾನದ ಸಣ್ಣ ಹಾರಾಟದ ನಂತರ, ಪೈಲಟ್ ಪರ್ವಿಂದರ್ ಸಿಂಗ್ ಚಾಹಲ್ ಅವರಿಂದ ರಷ್ಯಾದ ಸುಖೋಯ್ ಎಂ30 ಎಂಕೆಐ ಯುದ್ಧ ವಿಮಾನದ ಕಸರತ್ತು ನಡೆಯಿತು. ಅತಿ ಹಾಗೂ ಕಡಿಮೆ ವೇಗ, ತಿರುಗುವ, ಮೇಲೇರುವ ಮತ್ತು ತಲೆ ಕೆಳಗಾಗಿ ಸಾಗುವ ಕಸರತ್ತು ಪ್ರದರ್ಶಿಸಿದರು. ಇದರ ನಂತರದ್ದು ಎನ್‌ಎಎಲ್ ನಿರ್ಮಿಸಿದ ಹಂಸ ಎನ್‌ಜಿ ಎಂಬ ಪುಟ್ಟ ವಿಮಾನ ಹಾಗೂ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಡಾರ್ನಿಯರ್ ವಿಮಾನದ ಸಣ್ಣ ಹಾರಾಟ ನಡೆಯಿತು.
ಅಮೆರಿಕ ವಾಯು ಸೇನೆಯ ಎಫ್–35 ಹಾಗೂ ರಷ್ಯಾದ ಸುಖೋಯ್–57 ಯುದ್ಧ ವಿಮಾನಗಳು ಭಾರಿ ಶಬ್ಧದೊಂದಿಗೆ ಆಕಾಶ ಸೀಳಿಕೊಂಡು ಹೋಗುವಂತಹ ವೈಮಾನಿಕ ಕಸರತ್ತು ರೋಮಾಂಚನ ಉಂಟು ಮಾಡಿದವು. ಅಂತಿಮವಾಗಿ ಒಂಬತ್ತು ಹಾಕ್ ಎಂಕೆ–132 ಯುದ್ಧ ವಿಮಾನಗಳ ಕಸರತ್ತು ನೆರೆದವರ ಚಪ್ಪಾಳೆ ಗಿಟ್ಟಿಸಿತು. ಗ್ರೂಪ್ ಕ್ಯಾಪ್ಟನ್ ಸಿದ್ಧೇಶ್ ಕಾರ್ತಿಕ್ ಅವರ ನೇತೃತ್ವದ ತಂಡವು ಆಗಸದಲ್ಲಿ ವ್ಯೋಮದೊಂದಿಗೆ ಮಾಡುತ್ತಿದ್ದ ಹಲವು ಕಸರತ್ತುಗಳು ಮೈನವಿರೇಳಿಸುವಂತಿದ್ದವು. ಪರಸ್ಪರ ಡಿಕ್ಕಿ ಹೊಡೆಯುವಂತ ಸಾಹಸದ ಜತೆಗೆ, ಯುವಜನತೆಯ ಪ್ರತೀಕವಾಗಿ ಇಂಗ್ಲೀಷ್ ‘ವೈ’ ಅಕ್ಷರ, ‘ಎ’ ಅಕ್ಷರದಂತೆ ಸಾಗುವ ಪ್ರದರ್ಶನ, ರಾಷ್ಟ್ರಧ್ವಜದ ಮಾದರಿಯ ಹೊಗೆಯುಗುಳುತ್ತಾ ಸಾಗುವ ಮತ್ತು ಹೃದಯವನ್ನು ಮೂಡಿಸುವ ಕಸರತ್ತುಗಳು ಪ್ರೇಕ್ಷಕರನ್ನು ರಂಜಿಸಿದವು.
ಸುಮಾರು ಎರಡು ಗಂಟೆಗಳ ವೈಮಾನಿಕ ಪ್ರದರ್ಶನಕ್ಕೆ ಹತ್ತು ವರ್ಷಗಳ ಹಿಂದೆ ಭೇಟಿ ನೀಡಿದವರು ಅಂದು ಕಂಡಿದ್ದ ವೈಮಾನಿಕ ಪ್ರದರ್ಶನಗಳನ್ನು ಪರಸ್ಪರ ಮೆಲುಕು ಹಾಕುತ್ತಿದ್ದ ದೃಶ್ಯ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.