ADVERTISEMENT

ಏರ್ ಶೋ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಅನಾಹುತ: ಸುಮಾರು 300 ಕಾರು ಭಸ್ಮ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 8:53 IST
Last Updated 23 ಫೆಬ್ರುವರಿ 2019, 8:53 IST
   

ಬೆಂಗಳೂರು: ‘ಏರೋ ಇಂಡಿಯಾ’ದ ಡೊಮೆಸ್ಟಿಕ್ ಪಾರ್ಕಿಂಗ್ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಎಂಜಿನ್ ನಲ್ಲಿ ಶಾರ್ಟ್ ಸರ್ಕೀಟ್ ಉಂಟಾಗಿ ಅವಘಡ ಸಂಭವಿಸಿತು‌. ಒಂದು ಕಾರಿಗೆ ಹೊತ್ತಿಕೊಂಡ ಬೆಂಕಿ, ಪಕ್ಕದ ಮೂರು ಕಾರುಗಳಿಗೂ ವ್ಯಾಪಿಸಿತು. ಸುಮಾರು 300 ಕಾರುಗಳು ಸುಟ್ಟು ಭಸ್ಮವಾಗಿದೆ. 10 ಅಗ್ನಿಶಾಮಕ ದಳದ ವಾಹನಗಳು ಹಾಗೂ ಖಾಸಗಿಯ 5 ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.

ಫೆ.20 ರಿಂದ ನಡೆಯುತ್ತಿರುವ ವೈಮಾನಿಕ‌ ಪ್ರದರ್ಶನದಲ್ಲಿ ಶನಿವಾರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ವಾರಾಂತ್ಯದ ದಿನವಾದ ಕಾರಣ ಹೆಚ್ಚಿ‌ನ ಜನ ಏರ್ ಶೋ ನಲ್ಲಿ ಪಾಲ್ಗೊಂಡಿದ್ದಾರೆ.

ADVERTISEMENT

ವಾಯುನೆಲೆ ಸುತ್ತ ದಟ್ಟ ಹೊಗೆ ಎದ್ದಿದ್ದರಿಂದ, ಯಾವುದೋ ವಿಮಾನ ಪತನ ಆಗಿರಬಹುದೆಂದು ಜನ ಗಾಬರಿಗೊಂಡರು. ಈ ವೇಳೆ ಸಂಘಟಕರು ‘ವಾಯುನೆಲೆಯ ಹೊರಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ವಿಮಾನಗಳ ಪ್ರದರ್ಶನದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪಾರ್ಕಿಂಗ್ ಪ್ರದೇಶದಲ್ಲಿ ಯಾರೂ ಇರಲಿಲ್ಲ. ಹೊಗೆ ಕಾಣಿಸಿಕೊಂಡ ಐದೇ ನಿಮಿಷದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದರು. ಹೀಗಾಗಿ, ಹೆಚ್ಚಿನ‌ ಹಾನಿ‌ ಸಂಭವಿಸಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

‘ಏರ್ ಶೋ ಶುರುವಾಗುವ ಮುನ್ನಾದಿನ ಸೂರ್ಯಕಿರಣ ವಿಮಾನ ದುರಂತಕ್ಕೀಡಾಗಿ ಪೈಲಟ್ ನಿಧನರಾಗಿದ್ದರು. ಹೀಗಾಗಿ, ಸಹಜವಾಗಿಯೇ ಜನ ಆತಂಕಕ್ಕೆ ಒಳಗಾಗಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ’ ಎಂದರು

ಕೆಲ ಹೊತ್ತು ಏರ್ ಶೋ ಸ್ಥಗಿತ

ಅಗ್ನಿ ಅನಾಹುತ ಸಂಭವಿಸಿದ್ದರಿಂದ ಕೆಲ ಹೊತ್ತು ವೈಮಾನಿಕ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ವಾಯುಪಡೆ ಅಧಿಕಾರಿಗಳು ಚರ್ಚೆ ನಡೆಸಿದ ನಂತರವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.