
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನವೆಂಬರ್ 13ರಿಂದ 16ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಸಮೃದ್ಧ ಕೃಷಿ ವಿಕಸಿತ ಭಾರತ– ನೆಲ, ಜಲ, ಬೆಳೆ’ ಎಂಬ ಘೋಷವಾಕ್ಯದಡಿ ಕೃಷಿ ಮೇಳ ನಡೆಯಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕೃಷಿ ಪ್ರವಾಸೋದ್ಯಮ ಎಂಬ ಹೊಸ ಪರಿಕಲ್ಪನೆಯೊಂದಿಗೆ ಈ ಬಾರಿಯ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಪಾರಂಪರಿಕ ಕೃಷಿ ಪದ್ಧತಿ, ದೈನಂದಿನ ಕೃಷಿ ಚಟುವಟಿಕೆಗಳು, ಗ್ರಾಮೀಣ ಕಲೆ–ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ–ತೊಡಿಗೆ ಮುಂತಾದವುಗಳನ್ನು ನಗರವಾಸಿಗಳಿಗೆ ಪರಿಚಯಿಸಲಾಗುವುದು’ ಎಂದರು.
‘ಪ್ರವಾಸಿಗರನ್ನು ಕೃಷಿಭೂಮಿಗೆ ಕರೆತರುವುದು ಮತ್ತು ಅವರಿಗೆ ಕೃಷಿ ಆಧಾರಿತ ಚಟುವಟಿಕೆಗಳನ್ನು ತೋರಿಸುವುದು ಮತ್ತು ಭಾಗವಹಿಸಲು ಅವಕಾಶ ನೀಡುವುದು. ಆಸಕ್ತರಿಗೆ ಪರಿಚಯಿಸುವ ಮೂಲಕ ಆದಾಯವನ್ನು ಕಂಡುಕೊಳ್ಳುವುದು ಕೃಷಿ ಪ್ರವಾಸೋದ್ಯಮದ ಉದ್ದೇಶವಾಗಿದೆ’ ಎಂದು ತಿಳಿಸಿದರು.
‘ಮೇಳದಲ್ಲಿ 700ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಕೃಷಿಕರ ಅನುಕೂಲಕ್ಕಾಗಿ ಜಿಕೆವಿಕೆ ಮುಖ್ಯದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಉಚಿತ ಸಾರಿಗೆ ವ್ಯವಸ್ಥೆ, ಪ್ರತ್ಯೇಕ ವಾಹನ ನಿಲುಗಡೆ ಮತ್ತು ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.
ಮೊದಲ ಬಾರಿಗೆ ಕೀಟವಿಸ್ಮಯ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದು ಮಕ್ಕಳಿಗೆ ಮತ್ತು ಕೃಷಿ ಆಸಕ್ತರಿಗೆ ಆಕರ್ಷಣೆ ಆಗಲಿದೆ. ಭಾರತೀಯ, ಸ್ಥಳೀಯ ಆಲಂಕಾರಿಕ ಮೀನುಗಳು, ಸಿಹಿನೀರು ಮುತ್ತಿನ ಕೃಷಿ ಹಾಗೂ ಸುಧಾರಿತ ತಳಿಗಳ ಪ್ರದರ್ಶನ ಮತ್ತು ಮಾರಾಟವನ್ನು ಒಳಗೊಂಡಿರುವ ಮತ್ಸ್ಯಲೋಕ ಅನಾವರಣಗೊಳಿಸಲಾಗುತ್ತದೆ.
‘ಮೇಳದಲ್ಲಿ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ, ನಾಲ್ಕು ಹೊಸ ತಳಿಗಳಾದ ಧಾನ್ಯ ಜೋಳ, ಕಪ್ಪು ಅರಿಶಿಣ ಮತ್ತು ಅರಿಶಿಣ, ಸೂರ್ಯಕಾಂತಿ ಮತ್ತು ಹರಳು ಬೆಳೆಯಲ್ಲಿ ತಲಾ ಒಂದರಂತೆ ಎರಡು ಸಂಕರಣ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ನ. 13ರಂದು ಬೆಳಿಗ್ಗೆ 11ಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಮೇಳಕ್ಕೆ ಚಾಲನೆ ನೀಡಲಿದ್ದು, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆ ವಹಿಸಲಿದ್ದು, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಲಿದ್ದಾರೆ.
‘ಸಮೃದ್ಧ ಕೃಷಿಯಿಂದ ವಿಕಸಿತ ಭಾರತ ಸಂವಾದ’
ಮೇಳದಲ್ಲಿ ನ. 14ರಂದು ಸಮೃದ್ಧ ಕೃಷಿಯಿಂದ ವಿಕಸಿತ ಭಾರತ ನ. 15ರಂದು ಕೃಷಿ ಪ್ರವಾಸೋದ್ಯಮ–ಅವಕಾಶಗಳು ಮತ್ತು ಸವಾಲು ನ. 16ರಂದು ದೇಸಿಯ ತಳಿಗಳು ಮತ್ತು ಕೃಷಿ ಪದ್ಧತಿಗಳು ಕುರಿತು ಚರ್ಚಾಗೋಷ್ಠಿಗಳು ನಡೆಯಲಿವೆ’ ಎಂದು ಎಸ್.ವಿ. ಸುರೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.