
ಬೆಂಗಳೂರು: ಹವಾಮಾನ ಬದಲಾವಣೆ, ಕೀಟ–ರೋಗಗಳ ನಿರ್ವಹಣೆ, ಜಲ ಸಂಪನ್ಮೂಲಗಳ ಕಡಿಮೆ ಲಭ್ಯತೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಬೆಳೆ ವಿಶ್ಲೇಷಣೆ ಮಹತ್ವದ ಪರಿಹಾರವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯ ಸೋಮವಾರ ಆಯೋಜಿಸಿದ್ದ ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ಕೃಷಿ ವಿಜ್ಞಾನಿಗಳಿಗೆ ಸ್ಮಾರ್ಟ್ ಕೃಷಿಯ ಬಗ್ಗೆ ಸಲಹೆ, ಎಐ ತಂತ್ರಜ್ಞಾನ ಆಧಾರಿತ ಬೆಳೆ ವಿಶ್ಲೇಷಣೆ ನಡೆಸುವ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಮ್ಮ ಕೆವಿಕೆ ವಿಜ್ಞಾನಿಗಳು ಗ್ರಾಮೀಣ ಭಾಗದ ರೈತರು ಹಾಗೂ ವಿಶ್ವವಿದ್ಯಾಲಯಗಳ ನಡುವೆ ಜ್ಞಾನದ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರ ಜೊತೆಗೆ ರೈತರ ಹೊಲ, ಗದ್ದೆಗಳಿಗೆ ಭೇಟಿ ನೀಡಿ ವೈಜ್ಞಾನಿಕ ಸಲಹೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ವಿಜ್ಞಾನಿಗಳಿಗೆ ಹೊಸ–ಹೊಸ ತಂತ್ರಜ್ಞಾನದ ತರಬೇತಿಗಳನ್ನು ನೀಡಲಾಗುತ್ತಿದೆ’ ಎಂದರು.
‘ವಿಸ್ತರಣಾ ನಿರ್ದೇಶಕ ವೈ.ಎನ್. ಶಿವಲಿಂಗಯ್ಯ ಮಾತನಾಡಿ, ‘ಹೊಸ ತಂತ್ರಜ್ಞಾನಗಳು ರೈತರ ಬದುಕಿಗೆ ಹೊಸ ಭರವಸೆ ನೀಡುತ್ತವೆ. ರೈತರಿಗೆ ತಲಪುವ ಪ್ರತಿಯೊಂದು ಸಲಹೆಯೂ ಹೆಚ್ಚು ನಿಖರ, ವೈಜ್ಞಾನಿಕ ಮತ್ತು ಫಲಪ್ರದವಾಗಬೇಕು’ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕಿ ಸುಮಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.