
ಬೆಂಗಳೂರು: ‘ನ್ಯಾಯಾಂಗ ಕ್ಷೇತ್ರದ ಮೇಲೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ವಕೀಲರು ಕೆಲಸ ಉಳಿಸಿಕೊಳ್ಳಲು ಹೊಸ ಹೊಸ ಆಯಾಮಕ್ಕೆ ತೆರೆದುಕೊಳ್ಳಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ವಕೀಲರ ಸಂಘ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.‘ಎಐ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ನ್ಯಾಯಾಂಗ ಸೇರಿ ಎಲ್ಲ ಕ್ಷೇತ್ರವನ್ನೂ ತಂತ್ರಜ್ಞಾನ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ವಕೀಲರ ಕೆಲಸ ಕಡಿಮೆಯಾಗುವ ಸಾಧ್ಯತೆಯಿದೆ. ಅವರು ಬದುಕು ಕಟ್ಟಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ಚರ್ಚೆಗಳು ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ನ್ಯಾಯಾಂಗ ಕ್ಷೇತ್ರಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಕೆಲಸಗಳು ಎಐ ತಂತ್ರಜ್ಞಾನದ ನೆರವಿನಿಂದ ಸುಲಭಸಾಧ್ಯವಾಗಲಿದೆ. ಕ್ರಯ ಪತ್ರ, ಭೋಗ್ಯ ಪತ್ರ, ಚೆಕ್ ಬೌನ್ಸ್ ಪ್ರಕರಣದಲ್ಲಿ ನೋಟಿಸ್ ನೀಡುವಿಕೆಯಂತಹ ಕೆಲಸಗಳನ್ನು ಚಾಟ್ ಜಿಟಿಪಿ ನೆರವಿನಿಂದ ಜನಸಾಮಾನ್ಯರು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.
‘ಭಾರತೀಯ ಭಾಷೆಗಳಲ್ಲಿ ಕೆಲ ಭಾಷೆಗಳು ನಶಿಸಿ ಹೋಗುತ್ತಿವೆ. ಒಂದು ಭಾಷೆ ಮರೆಯಾದರೆ ಆ ಭಾಷೆಯಲ್ಲಿನ ಜ್ಞಾನ ಮತ್ತು ಅನುಭವವನ್ನು ಕಳೆದುಕೊಳ್ಳುತ್ತೇವೆ. ಬಹುಭಾಷೆ, ಬಹು ಸಂಸ್ಕೃತಿಯನ್ನು ರಕ್ಷಿಸಬೇಕಿದೆ. ಈಗ ಮತ್ತೆ ಹಿಂದಿ ಹೇರಿಕೆಯ ಕೂಗು ಕೇಳಿಬರುತ್ತಿದೆ. ಅನ್ಯ ಭಾಷೆ ಹೇರಿಕೆಗೆ ಅವಕಾಶ ನೀಡದೆ ಕನ್ನಡ ಉಳಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ವಕೀಲರು ವಿವಿಧ ಪ್ರಕರಣಗಳಲ್ಲಿನ ವಿಷಯ ವಸ್ತುವನ್ನು ಕಥೆಯ ರೂಪದಲ್ಲಿ ಬರೆಯುವ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಬೇಕು’ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ 254 ಭಾಷೆಗಳು ಈಗಾಗಲೇ ಮರೆಯಾಗಿವೆ. ಕರ್ನಾಟಕದ ಒಳಗಡೆ ವಿವಿಧ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ರಾಜ್ಯದಲ್ಲಿ 230ಕ್ಕೂ ಹೆಚ್ಚು ಭಾಷೆಗಳಿವೆ. ಭಾರತದ ಭಾಷೆಗಳು ರಂಗೋಲಿ ರೀತಿಯಿದ್ದು, ಒಂದೇ ಬಣ್ಣದ ರಂಗೋಲಿ ಸುಂದರವಾಗಿ ಕಾಣುವುದಿಲ್ಲ. ಆದ್ದರಿಂದ ದೇಶದಲ್ಲಿರುವ ಎಲ್ಲ ಭಾಷೆಗಳನ್ನು ಉಳಿಸಬೇಕು’ ಎಂದು ಹೇಳಿದರು.
ವಕೀಲರ ಸಂಘದ ಉಪಾಧ್ಯಕ್ಷ ಗಿರೀಶ್ ಕುಮಾರ್, ‘ಕನ್ನಡವು ಶ್ರೀಮಂತ ಭಾಷೆಯಾಗಿದೆ. ಆದ್ದರಿಂದಲೇ ಬೇರೆ ರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರೂ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದಾರೆ. ಈ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ, ವರ್ಷಪೂರ್ತಿ ಭಾಷೆಯನ್ನು ಬಳಸಿ ಬೆಳೆಸಬೇಕು’ ಎಂದರು.
ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಇದೇ ವೇಳೆ ಗೌರವಿಸಲಾಯಿತು. ಬಳಿಕ ಡಿ.ಆರ್.ರಾಜಪ್ಪ ಮತ್ತು ತಂಡದಿಂದ ಜನಪದ ಗೀತೆಗಳ ಗಾಯನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.