ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸಿ.ಎನ್. ಮಂಜುನಾಥ್ ಅವರಿಗೆ ‘ಸರ್ ಎಂ.ವಿ. ಸ್ಮಾರಕ ಪ್ರಶಸ್ತಿ’ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಎಐ ತಂತ್ರಜ್ಞಾನದಿಂದ ಅನಾಹುತಗಳೇನು? ಎಷ್ಟು ಉದ್ಯೋಗ ಕಡಿತಗೊಳ್ಳಲಿವೆ ಎನ್ನುವ ಅನಗತ್ಯ ಭಯಕ್ಕೆ ಒಳಗಾಗುವುದು ಬೇಡ. ವೈದ್ಯಕೀಯ ಸೇರಿ ಹೆಚ್ಚಿನ ಕ್ಷೇತ್ರದಲ್ಲಿ ಬದಲಾವಣೆಗೆ ಅವಕಾಶವಾಗುತ್ತಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯುವ ಸಮುದಾಯವನ್ನು ಸಜ್ಜುಗೊಳಿಸಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದರು.
ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ಸೋಮವಾರ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಸರ್.ಎಂ.ವಿ. ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
‘ಎಐ ತಂತ್ರಜ್ಞಾನ ಯಾವ ರೀತಿಯಲ್ಲಿ ವೈದ್ಯಕೀಯ ಕ್ಷೇತ್ರವನ್ನು ಆವರಿಸುತ್ತಿದೆ ಎಂದರೆ ನಮ್ಮ ಈಗಿನ ದೈಹಿಕ ಆರೋಗ್ಯ ಮಾತ್ರವಲ್ಲ. ಮುಂದಿನ 20 ವರ್ಷಗಳಲ್ಲಿ ಬರಬಹುದಾದ ರೋಗಗಳ ಮಾಹಿತಿಯನ್ನು ನೀಡುವ ಮಟ್ಟಿಗೆ ಬೆಳೆದಿದೆ. ಈ ರೀತಿ ಆತಂಕ ಹುಟ್ಟಿಸುವ ತಂತ್ರಜ್ಞಾನ ಬಳಸುವಾಗ ಎಚ್ಚರಿಕೆ ವಹಿಸಬೇಕು. ಅದಲ್ಲದೇ ಜೀವನಶೈಲಿಗೆ ಮಾರಕವಾಗುತ್ತಿರುವ ಸಾಮಾಜಿಕ ಮಾಧ್ಯಮಗಳ ಬಳಕೆಗೂ ನಿಯಂತ್ರಣ ಹೇರಿಕೊಳ್ಳಬೇಕು’ ಎಂದು ನುಡಿದರು.
ತಂತ್ರಜ್ಞಾನದ ಆವಿಷ್ಕಾರಗಳು ಸಾಮಾನ್ಯರ ಬದುಕಿಗೂ ಪ್ರವೇಶಿಸಿ ಉಪಯೋಗವಾಗುತ್ತಿರುವುದು ನಿಜ. ಇದರ ಜತೆಗೆ ಮೂಲ ವಿಜ್ಞಾನವನ್ನು ಮರೆಯಬಾರದು. ಯುವಕರಲ್ಲಿ ಕೌಶಲವನ್ನು ಇನ್ನಷ್ಟು ಹೆಚ್ಚಿಸುತ್ತಲೇ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಅವರನ್ನು ಅಣಿಗೊಳಿಸಬೇಕು ಎಂದು ಸೂಚಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ಉಪನ್ಯಾಸ ನೀಡಿದರು. ರಾಜ್ಯಸಭಾ ಸದಸ್ಯ ಲಹರ್‌ಸಿಂಗ್ ಸಿರೋಯ್, ಒಕ್ಕೂಟದ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ನಿಯೋಜಿತ ಅಧ್ಯಕ್ಷೆ ಉಮಾರೆಡ್ಡಿ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಕೆ.ರಾಮಸ್ವಾಮಿ, ನಿಕಟಪೂರ್ವ ಅಧ್ಯಕ್ಷ ರಮೇಶಚಂದ್ರ ಲಹೋಟಿ, ಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಂ ಪ್ರಸಾದ್ ಹಾಜರಿದ್ದರು.
ಜ್ಞಾನ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುವುದು ಸಮಾಜದ ಪ್ರಗತಿಗೆ ಪೂರಕವಾಗಲಿದೆ ಎನ್ನುವುದಕ್ಕೆ ಶತಮಾನದ ಹಿಂದೆ ಸರ್ ಎಂವಿ ಮಾಡಿದ ಕೆಲಸಗಳೇ ಸಾಕ್ಷಿ.– ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧಿಪತಿ. ಆದಿಚುಂಚನಗಿರಿ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.