ADVERTISEMENT

ಜಯದೇವಕ್ಕೆ ಏಮ್ಸ್ ವೈದ್ಯರ ತಂಡ ಭೇಟಿ

ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ತಜ್ಞರ ತಂಡ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 14:43 IST
Last Updated 24 ಜನವರಿ 2026, 14:43 IST
ಜಯದೇವ ಸಂಸ್ಥೆ ವ್ಯವಸ್ಥೆ ಪರಿಶೀಲಿಸಿದ ಏಮ್ಸ್ ವೈದ್ಯರ ತಂಡ
ಜಯದೇವ ಸಂಸ್ಥೆ ವ್ಯವಸ್ಥೆ ಪರಿಶೀಲಿಸಿದ ಏಮ್ಸ್ ವೈದ್ಯರ ತಂಡ   

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ವೈದ್ಯರ ತಂಡ, ಜಯದೇವ ಸಂಸ್ಥೆಯಲ್ಲಿನ ವೈದ್ಯಕೀಯ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. 

ಐವರು ವೈದ್ಯಕೀಯ ತಜ್ಞರನ್ನು ಒಳಗೊಂಡ ತಂಡವು, ಸಂಸ್ಥೆಯಲ್ಲಿನ ಚಿಕಿತ್ಸಾ ಸೇವೆಗಳು, ಆಡಳಿತ ವ್ಯವಸ್ಥೆ, ರೋಗಿಯ ಆರೈಕೆ ಕ್ರಮಗಳು ಮತ್ತು ಗುಣಮಟ್ಟದ ಮಾನದಂಡಗಳನ್ನು ಪರಿಶೀಲನೆ ನಡೆಸಿತು. ಹೊರರೋಗಿ ಹಾಗೂ ಒಳರೋಗಿ ವಿಭಾಗ, ಪ್ರಯೋಗಾಲಯ, ವಾರ್ಡ್‌ಗಳು, ಹೃದಯ ಶಸ್ತ್ರಚಿಕಿತ್ಸಾ ವಿಭಾಗ ಸೇರಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿತು. 

‘ಜಾಗತಿಕ ಮನ್ನಣೆ ಪಡೆದಿರುವ ಜಯದೇವ ಹೃದ್ರೋಗ ಸಂಸ್ಥೆಯ ಕೆಲವು ಕಾರ್ಯವಿಧಾನಗಳನ್ನು ಏಮ್ಸ್‌ನಲ್ಲಿ ಅಳವಡಿಸಿಕೊಳ್ಳಲಾಗುವುದು. ಏಮ್ಸ್‌ನಲ್ಲಿ ರೊಬೋಟಿಕ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ, ಏಮ್ಸ್ ವತಿಯಿಂದ ಜಯದೇವ ಸಂಸ್ಥೆಯ ತಜ್ಞರಿಗೆ ತರಬೇತಿ ನೀಡುವ ಮೂಲಕ, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಏಮ್ಸ್ ಮತ್ತು ಜಯದೇವ ಜಂಟಿಯಾಗಿ ಸಂಶೋಧನೆ ನಡೆಸಲಿವೆ’ ಎಂದು ಏಮ್ಸ್‌ ನಿರ್ದೇಶಕ ಡಾ. ಶ್ರೀನಿವಾಸ್ ಮದ್ದೂರು ತಿಳಿಸಿದರು. 

ADVERTISEMENT

ಜಯದೇವ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್, ‘ನಮ್ಮ ಸಂಸ್ಥೆಯ ವೈದ್ಯರ ತಂಡವನ್ನು ಏಮ್ಸ್‌ಗೆ ಕಳುಹಿಸಲಾಗುವುದು. ಅಲ್ಲಿನ ಕಾರ್ಯವೈಖರಿ ಮತ್ತು ನಿರ್ವಹಣೆಯ ಬಗ್ಗೆ ವೈದ್ಯರ ತಂಡ ತಿಳಿದುಕೊಂಡು ಬರಲಿದೆ’ ಎಂದರು. 

ಏಮ್ಸ್ ವೈದ್ಯರ ತಂಡದಲ್ಲಿದ್ದ ಡಾ. ಮಹೇಶ್, ಕನಿಕಾ ಜೈನ್, ಅಕ್ಷಯ್ ಕುಮಾರ್, ಡಾ. ವಿವೇಕ್ ತಂಡನ್ ಅವರು ಜಯದೇವ ಸಂಸ್ಥೆಯ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.