ADVERTISEMENT

ಬೆಂಗಳೂರು: ತಗ್ಗಿದ ವಾಯುಮಾಲಿನ್ಯ ದಿಢೀರ್ ಏರಿಕೆ

ಗಾಳಿಯ ಗುಣಮಟ್ಟದ ಸೂಚ್ಯಂಕವು ಶೇ 30ರಿಂದ ಶೇ 50ರಷ್ಟು ಹೆಚ್ಚಳ

ವರುಣ ಹೆಗಡೆ
Published 24 ಜೂನ್ 2021, 20:25 IST
Last Updated 24 ಜೂನ್ 2021, 20:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ನಿಂದ ನಗರದಲ್ಲಿ ಇಳಿಕೆ ಕಂಡಿದ್ದ ಗಾಳಿಯ ಗುಣಮಟ್ಟದ ಸೂಚ್ಯಂಕವು (ಎಕ್ಯುಐ), ಲಾಕ್‌ಡೌನ್ ಸಡಿಲಿಕೆಯ ಒಂದು ವಾರದೊಳಗೇ ಶೇ 30ರಿಂದ ಶೇ 50ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ವಾಯುಮಾಲಿನ್ಯದ ಮಟ್ಟ ಮತ್ತೆ ಏರುಗತಿ ಪಡೆದಿದೆ.

ಕಳೆದ ವರ್ಷ ಅಕ್ಟೋಬರ್‌ ಬಳಿಕ ನಿಯಂತ್ರಣಕ್ಕೆ ಬಂದಿದ್ದ ಕೋವಿಡ್‌, ಮಾರ್ಚ್‌ ನಂತರ ಏರುಗತಿ ಪಡೆದುಕೊಂಡಿತು. ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿ ವ್ಯಾಪಿಸಿದ್ದರಿಂದ ಸರ್ಕಾರವು ಏ.10 ರಿಂದ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ವಿಧಿಸಿತ್ತು. ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಮೇ 10ಕ್ಕೆ ಪೂರ್ಣ ಪ್ರಮಾಣದ ಲಾಕ್‌ಡೌನ್ ಘೋಷಿಸಿತ್ತು. ಇದರಿಂದ ನಗರದಲ್ಲಿ ವಾಹನಗಳ ಸಂಚಾರಕ್ಕೆ ಕಡಿವಾಣ ಬಿದ್ದಿತ್ತು.

ಈ ವರ್ಷ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಕೋವಿಡ್‌ ಮೊದಲನೇ ಅಲೆ ನಿಯಂತ್ರಣಕ್ಕೆ ಬಂದಿದ್ದರಿಂದ ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು, ಮೆಟ್ರೊ ಸೇರಿದಂತೆ ವಿವಿಧ ಕಾಮಗಾರಿಗಳು ಮತ್ತೆ ಗರಿಗೆದರಲಾರಂಭಿಸಿತ್ತು. ಕೆಲ ಐಟಿ–ಬಿಟಿ ಕಂಪನಿಗಳು ಕೂಡ ಬಾಗಿಲು ತೆರೆದಿದ್ದವು. ಇದರಿಂದಾಗಿ ಎಂ.ಜಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಗಳ ಏರಿಕೆ ಕಂಡು, ಗಾಳಿಯ ಗುಣಮಟ್ಟದ ಸೂಚ್ಯಂಕವು ಹೆಬ್ಬಾಳ, ಜಯನಗರ, ಪೀಣ್ಯ, ಸೆಂಟ್ರಲ್ ಸಿಲ್ಕ್‌ಬೋರ್ಡ್ ಸೇರಿದಂತೆ ನಗರದ ಬಹುತೇಕ ಕಡೆ ನೂರರ ಗಡಿ ದಾಟಿತ್ತು.

ADVERTISEMENT

ಲಾಕ್‌ಡೌನ್ ಘೋಷಣೆಯಾದ ಬಳಿಕ ನಗರದಲ್ಲಿನ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿದ್ದವು. ಇದರಿಂದಾಗಿ ಎಕ್ಯುಐ ಶೇ 50ರಿಂದ ಶೇ 70ರವರೆಗೆ ಇಳಿಕೆಯಾಗಿ, ಗಾಳಿ ಶುದ್ಧಗೊಂಡಿತ್ತು. ಹೆಬ್ಬಾಳ, ಪೀಣ್ಯ, ಜಯನಗರ ಸೇರಿದಂತೆ ಬಹುತೇಕ ಕಡೆ ಎಕ್ಯುಐ 50ರ ಒಳಗಡೆಯೇ ಇದ್ದವು.

ಸಂಚಾರ ಹೆಚ್ಚಳ: ಜೂ.21ರಿಂದ 2ನೇ ಹಂತದ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಇದರಿಂದಾಗಿ ವಾಹನಗಳ ಸಂಚಾರ ಒಮ್ಮೆಲೇ ಹೆಚ್ಚಳವಾಗಿದ್ದು, ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ಕೆಲವೆಡೆ ಬೆಳಿಗ್ಗೆ ಮತ್ತು ಸಂಜೆಯ ಅವಧಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದಾಗಿ ಉತ್ತಮ ಹಂತಕ್ಕೆ ಇಳಿಕೆಯಾಗಿದ್ದ ಗಾಳಿಯ ಗುಣಮಟ್ಟ ಸೂಚ್ಯಂಕವು ಸಮಾಧಾನಕರ, ಮಧ್ಯಮ ಹಂತಕ್ಕೆ ತಲುಪಿದೆ. ಗಾಳಿಯ
ಲ್ಲಿನ ಮಲಿನಕಾರಕ ಕಣ ಹೆಚ್ಚಳವಾಗಿವೆ.

‘ಲಾಕ್‌ಡೌನ್ ಸಡಿಲಿಕೆಯಾಗುತ್ತಿದಂತೆ ಜನರ ಓಡಾಟ ಹೆಚ್ಚಳವಾಗಿದೆ. ಅದೇ ರೀತಿ, ಸಾರ್ವಜನಿಕ ಸಾರಿಗೆ ಸಂಚಾರ ಕೂಡ ಪುನರಾರಂಭವಾಗಿದೆ. ಸ್ಥಗಿತವಾಗಿದ್ದ ವಿವಿಧ ಕಾಮಗಾರಿಗಳಿಗೆ ಈಗ ವೇಗ ನೀಡಲಾಗುತ್ತಿದೆ. ಇದರಿಂದಾಗಿ ಎಕ್ಯುಐ ಹೆಚ್ಚಳವಾಗಿದೆ. ವಾಹನಗಳ ಸಂಚಾರದಿಂದ ನೆಲದ ಮೇಲಿನ ದೂಳಿನ ಕಣಗಳು ಗಾಳಿಯಲ್ಲಿ ಹಾರಾಡುತ್ತವೆ. ಆಗ ಮಾಲಿನ್ಯವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಪರಿಸರ ಅಧಿಕಾರಿ ಶ್ರೀಧರ್ ನಾಯ್ಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.