ADVERTISEMENT

ಮಂದಗಾಳಿ, ವಾಯುಮಾಲಿನ್ಯ: ಬೆಂಗಳೂರು ನಗರದ ಜನತೆ ಹೈರಾಣ

ತಾಪಮಾನ ಏರುಪೇರು: ಉಸಿರಾಟ ತೊಂದರೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ

ವರುಣ ಹೆಗಡೆ
Published 19 ಫೆಬ್ರುವರಿ 2020, 4:04 IST
Last Updated 19 ಫೆಬ್ರುವರಿ 2020, 4:04 IST
ಜೆ.ಸಿ ರಸ್ತೆಯಲ್ಲಿ ಕಲುಷಿತಗೊಂಡ ವಾತಾವರಣ – ಪ್ರಜಾವಾಣಿ ಚಿತ್ರ
ಜೆ.ಸಿ ರಸ್ತೆಯಲ್ಲಿ ಕಲುಷಿತಗೊಂಡ ವಾತಾವರಣ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಂದಗಾಳಿಯಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಉಸಿರಾಟ ತೊಂದರೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ನಗರದಲ್ಲಿ 80 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುತ್ತಿದ್ದು, ವಿವಿಧ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದಾಗಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಇನ್ನೊಂದೆಡೆ, ನಮ್ಮ ಮೆಟ್ರೊ ಎರಡನೇ ಹಂತದ ಕಾಮಗಾರಿ, ಕಟ್ಟಡಗಳು ಹಾಗೂ ರಸ್ತೆಗಳ ಕಾಮಗಾರಿ, ಕೈಗಾರಿಕೆಗಳು ಹೊರಸೂಸುವ ಹೊಗೆ ಕೂಡಾ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ.

ಮಳೆಗಾಲ ಹಾಗೂ ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚಿರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ (ಎಕ್ಯೂಐ)ವ್ಯತ್ಯಾಸ ಕಾಣಿಸಿಕೊಳ್ಳುತ್ತಿದೆ. ನಗರದ ತಾಪಮಾನದಲ್ಲಿಯೂ ಏರುಪೇರಾಗುತ್ತಿದ್ದು, ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.

ADVERTISEMENT

ಕಳೆದ ನವೆಂಬರ್‌ನಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ ಸುತ್ತಮುತ್ತ ಗಾಳಿಯ ಗುಣಮಟ್ಟದ ಸೂಚ್ಯಂಕ 83 ಇತ್ತು. ಈಗ ಅದರ ಪ್ರಮಾಣ 108ಕ್ಕೆ ತಲುಪಿದೆ. ನಿಮ್ಹಾನ್ಸ್, ಹೆಬ್ಬಾಳ, ನಗರ ರೈಲ್ವೆ ನಿಲ್ದಾಣದಲ್ಲೂ ಹಿಂದಿನ ತಿಂಗಳುಗಳ ಮಾಲಿನ್ಯ ಪ್ರಮಾಣಕ್ಕೆ ಹೋಲಿಸಿದರೆ ಭಾರಿ ವ್ಯತ್ಯಾಸ ಕಂಡುಬಂದಿದೆ. ಕೆಲವು ದಿನ ಮಾಲಿನ್ಯಕಾರಕ ಕಣಗಳು (ಪಿಎಂ)-10 (ಸೂಕ್ಷ್ಮ) ಹಾಗೂ ಪಿಎಂ-2.5 (ಅತಿ ಸೂಕ್ಷ್ಮ) ದೂಳಿನ ಕಣಗಳು ಕಾಣಿಸಿಕೊಳ್ಳುತ್ತಿವೆ. 1 ಸಾವಿರ ಲೀಟರ್ ಗಾಳಿಯಲ್ಲಿ ಪಿಎಂ-10 ಪ್ರಮಾಣ 100 ಮೈಕ್ರೊ ಗ್ರಾಂ ಹಾಗೂ ಪಿಎಂ-2.5 ಪ್ರಮಾಣ 60 ಮೈಕ್ರೊ ಗ್ರಾಂ ಮೀರಬಾರದು. ಕೆಲ ವೇಳೆ ಈ ಪ್ರಮಾಣ ಮೀರುತ್ತಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

‘ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗಿ ತೇವಾಂಶ ಹೆಚ್ಚುವುದರಿಂದ ದೂಳಿನ ಕಣಗಳು ಆಕಾಶಕ್ಕೆ ಹೋಗದೆ ತಳಮಟ್ಟದಲ್ಲೇ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಜೋರಾದ ಗಾಳಿ ಬೀಸಿದಾಗ ಈ ದೂಳಿನ ಕಣಗಳು ಹರಡಿ, ಹೆಚ್ಚು ವಾಯುಮಾಲಿನ್ಯ ಉಂಟಾಗಲು ಕಾರಣವಾಗುತ್ತವೆ. ಬೇಸಿಗೆಯಲ್ಲಿ ದೂಳಿನ ಕಣಗಳು ಸುಮಾರು 1 ಕಿ.ಮೀ. ಗಿಂತ ಹೆಚ್ಚು ಮೇಲಕ್ಕೆ ಹೋಗುತ್ತವೆ. ಚಳಿಗಾಲದಲ್ಲಿ ಇವು ಅಷ್ಟು ಎತ್ತರ ಹೋಗುವುದಿಲ್ಲ’ ಎಂದು ಕೆಎಸ್‌ಪಿಸಿಬಿಸದಸ್ಯ ಕಾರ್ಯದರ್ಶಿ ಬಸವರಾಜ್ ಪಾಟೀಲ ತಿಳಿಸಿದರು.

ಅನಾರೋಗ್ಯ ಸಮಸ್ಯೆ:ತಾಪಮಾನದಲ್ಲಿ ಏರುಪೇರು ಮತ್ತುವಾಯುಮಾಲಿನ್ಯದ ಕಾರಣ ತ್ವಚೆಯ ಅಲರ್ಜಿ, ಉಸಿರಾಟದ ಸಮಸ್ಯೆ, ಕಣ್ಣಿನ ಉರಿ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಅವಧಿಯಲ್ಲಿ ಹೆಚ್ಚಾಗಿ ಅನಾರೋಗ್ಯ ಕಿರಿಕಿರಿ ಅನುಭವಿಸುವವರು ಮಕ್ಕಳು ಹಾಗೂ ವೃದ್ಧರು.

‘ವಾಯುಮಾಲಿನ್ಯ ಹೆಚ್ಚಳದ ಜತೆಗೆ ತಾಪಮಾನದಲ್ಲಿನ ಏರುಪೇರಿನಿಂದ ಹತ್ತು ಮಕ್ಕಳಲ್ಲಿ 3ರಿಂದ 4 ಮಕ್ಕಳಲ್ಲಿ ಅಲರ್ಜಿ ಸಮಸ್ಯೆ ಕಂಡು
ಬರುತ್ತಿದೆ. ದೂಳಿಗೆ ದೇಹವನ್ನು ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ, ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸಿರುವುದು ಒಳಿತು’ ಎಂದು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ.ಸಂಜಯ್ ಕೆ.ಎಸ್ ತಿಳಿಸಿದರು.

ಅಂಕಿ–ಅಂಶಗಳು

80 ಲಕ್ಷ : ನಗರದಲ್ಲಿ ಇರುವ ಒಟ್ಟು ವಾಹನಗಳ ಸಂಖ್ಯೆ

1.39 ಕೋಟಿ:ನಗರದ ಜನಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.