ADVERTISEMENT

ದೆಹಲಿ ಹಾದಿ ಹಿಡಿಯಲಿದೆಯೇ ಬೆಂಗಳೂರು?

ವಾಯುಮಾಲಿನ್ಯದಿಂದ ಕ್ಯಾನ್ಸರ್‌ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಆಹ್ವಾನ l ಕಟ್ಟಡ ಕಾಮಗಾರಿಗಳಿಂದ ಹೆಚ್ಚಿದ ದೂಳು

ವರುಣ ಹೆಗಡೆ
Published 10 ನವೆಂಬರ್ 2019, 20:36 IST
Last Updated 10 ನವೆಂಬರ್ 2019, 20:36 IST
.
.   

ಬೆಂಗಳೂರು: ದೇಶದ ರಾಜಧಾನಿ ನವದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಮಿತಿಮೀರಿದ್ದು, ಅಲ್ಲಿನ ಜನ ಮುಖಗವಸು ಹಾಕಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿಲ್ಲವಾದರೂ ಭವಿಷ್ಯದಲ್ಲಿ ಈ ನಗರವೂ ದೆಹಲಿಯೇ ಹಾದಿ ಹಿಡಿಯಲಿದೆಯೇ ಎಂಬ ಆತಂಕ ಕಾಡುತ್ತಿರುವುದು ನಿಜ.

ವಾಹನಗಳ ದಟ್ಟಣೆ ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಯಿಂದ ಬೆಂಗಳೂರಿನಲ್ಲೂ ವಾತಾವರಣ ದಿನೇ ದಿನೇ ಕಲುಷಿತವಾಗುತ್ತಿದೆ.

ದೆಹಲಿ ಮತ್ತು ಅದರ ಉಪನಗರಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಅಪಾಯಕಾರಿ ಮಟ್ಟ ತಲುಪಿದೆ.ವಾಯುಮಾಲಿನ್ಯದ ಕಾರಣ ತ್ವಚೆಯ ಅಲರ್ಜಿ, ಉಸಿರಾಟದ ಸಮಸ್ಯೆ, ಕಣ್ಣಿನ ಉರಿ ಮತ್ತು ಹೃದಯ ಸಂಬಂಧಿ ತೊಂದರೆಗಳು ಅಲ್ಲಿನ ಜನರಲ್ಲಿ ಕಾಣಿಸಿಕೊಳ್ಳುತ್ತಿವೆ. ಅದೇ ರೀತಿ, ನಗರದ ಜನತೆಯಲ್ಲಿ ಹೃದಯ, ಶ್ವಾಸಕೋಶ, ಕ್ಯಾನ್ಸರ್ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಹೆಚ್ಚಲು ನಗರದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದು ಕೂಡ ಪ್ರಮುಖ ಕಾರಣ ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ಈಗಾಗಲೇ ಸಾಬೀತಾಗಿದೆ. ಆದರೆ,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮಾತ್ರ ನಗರದ ಜನತೆ ಆತಂಕ ಪಡಬೇಕಿಲ್ಲ ಎಂದು ಸಮಾಧಾನ ಹೇಳುತ್ತಿದೆ.

ADVERTISEMENT

ಅಭಿವೃದ್ಧಿಯ ಹೆಸರಿನಲ್ಲಿ ಮರಗಳಿಗೆ ಕೊಡಲಿ ಏಟು ಹಾಕಿ, ಎಲ್ಲೆಡೆ ಕಟ್ಟಡಗಳನ್ನು ಎಬ್ಬಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಉದ್ಯೋಗವನ್ನರಿಸಿ ನಗರಕ್ಕೆ ಬರುವವರ ಸಂಖ್ಯೆ ಕೂಡ ಒಂದೇ ಸಮನೆ ಹೆಚ್ಚಳವಾಗುತ್ತಿದೆ. ಇದರಿಂದಾಗಿ ವಸತಿ ಸಮುಚ್ಛಯಗಳ ನಿರ್ಮಾಣ ಕಾಮಗಾರಿಗಳು ನಗರದಲ್ಲಿ ಪ್ರಗತಿಯಲ್ಲಿವೆ. ಇನ್ನೊಂದೆಡೆ, ನಮ್ಮ ಮೆಟ್ರೊ ಎರಡನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ನಗರದ ವಿವಿಧ ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ದೂಳು ಗಾಳಿಯನ್ನು ಸೇರುತ್ತಿದೆ. ಕಸದ ರಾಶಿಗೆ ಬೆಂಕಿ ಹಾಕುತ್ತಿರುವುದು, ಅವಧಿ ಮೀರಿದ ವಾಹನಗಳ ಬಳಕೆ ಸೇರಿದಂತೆ ವಿವಿಧ ಕಾರಣದಿಂದ ನಗರದ ವಾಯು ಗುಣಮಟ್ಟ ಹಾಳಾಗುತ್ತಿದೆ.

ನಗರದಲ್ಲಾಗುತ್ತಿರುವ ವಾಯುಮಾಲಿನ್ಯದಲ್ಲಿ ಕೆಲವು ದಿನ ಮಾಲಿನ್ಯಕಾರಕ ಕಣಗಳು (ಪಿಎಂ)-10 (ಸೂಕ್ಷ್ಮ) ಹಾಗೂ ಪಿಎಂ-2.5 (ಅತಿ ಸೂಕ್ಷ್ಮ) ದೂಳಿನ ಕಣಗಳು ಕಾಣಿಸಿಕೊಳ್ಳುತ್ತಿವೆ. 1 ಸಾವಿರ ಲೀಟರ್ ಗಾಳಿಯಲ್ಲಿ ಪಿಎಂ-10 ಪ್ರಮಾಣ 100 ಮೈಕ್ರೊ ಗ್ರಾಂ ಹಾಗೂ ಪಿಎಂ-2.5 ಪ್ರಮಾಣ 60 ಮೈಕ್ರೊ ಗ್ರಾಂ ಮೀರಬಾರದು. ಕೆಲ ವೇಳೆ ಈ ಪ್ರಮಾಣ ಮೀರುತ್ತಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ನಗರದ ಸಂಚಾರ ಪೊಲೀಸರ ಪ್ರಕಾರ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕ ಪ್ರಮಾಣದಲ್ಲಿ ಇದ್ದು, ಆ ಭಾಗಗಳಲ್ಲಿ ವಾಯುಮಾಲಿನ್ಯಕ್ಕೆ ವಾಹನದಟ್ಟಣೆ ಪ್ರಮುಖ ಕಾರಣವಾಗಿದೆ. ಅದೇ ರೀತಿ, ನಗರದಲ್ಲಿ ಸಂಚರಿಸುತ್ತಿರುವ2 ಸ್ಟ್ರೋಕ್ ಆಟೊ ರಿಕ್ಷಾ ಕೂಡಾವಾಯು ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದುಕೆಎಸ್‌ಪಿಸಿಬಿ ಕ್ರಿಯಾಯೋಜನೆಯಲ್ಲಿ ತಿಳಿಸಿದ್ದು, 2020ರ ಮಾರ್ಚ್‌ಗೆಹೊಸ ಫೋರ್ ಸ್ಟ್ರೋಕ್ ಎಲ್‌ಪಿಜಿ ಆಟೊ ರಿಕ್ಷಾಕ್ಕೆ ಮಾರ್ಪಾಡು ಮಾಡಬೇಕೆಂದು ಶಿಫಾರಸು ಮಾಡಿದೆ.

ಮಾಲಿನ್ಯ ನಿಯಂತ್ರಣ ಭರವಸೆ: ನಗರದಲ್ಲಿನ ವಾಯು ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸಾರಿಗೆ, ಬಿಬಿಎಂಪಿ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗೆ ಮುನ್ನೆಚ್ಚರಿಕೆ ಕ್ರಮವನ್ನು ಈಗಲೇ ಕೈಗೊಳ್ಳುವಂತೆ ಕೆಎಸ್‌ಪಿಸಿಬಿ ಸೂಚಿಸಿದೆ.

‘ನವದೆಹಲಿಗೆ ಹೋಲಿಸಿದಲ್ಲಿ ನಗರದಲ್ಲಿ ಉತ್ತಮ ಮಳೆಯಾಗುವ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡ–ಮರಗಳಿವೆ. ಅಲ್ಲಿ ದಟ್ಟ ಮಂಜು ಇರುವುದರಿಂದ ದೂಳಿನ ಕಣಗಳು ಗಾಳಿಯಲ್ಲಿ ಸೇರಿ, ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ನಗರದಲ್ಲಿ ಆ ಸ್ಥಿತಿ ನಿರ್ಮಾಣವಾಗುವುದಿಲ್ಲ. ಮೆಟ್ರೊ, ಸಿಗ್ನಲ್ ಮುಕ್ತ ರಸ್ತೆಗಳು, ವಾಹನಗಳಲ್ಲಿ ಎಲ್‌ಪಿಜಿ ಬಳಕೆಯಂತಹ ಕ್ರಮಗಳಿಂದ ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಇನ್ನಷ್ಟು ಇಳಿಕೆಯಾಗುವ ವಿಶ್ವಾಸವಿದೆ’ ಎಂದು ಕೆಎಸ್‌ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಅಪಾಯಕಾರಿ ದೂಳಿನ ಕಣ ಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಿಸುವ ಯಂತ್ರಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲು ಬಿಬಿಎಂಪಿ ಟೆಂಡರ್ ಕರೆದಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾಲಿನ್ಯದ ಪ್ರಮಾಣ ಅಧಿಕವಿರುವ ಪ್ರಮುಖ ಸರ್ಕಲ್‍ಗಳಲ್ಲಿ ಗಾಳಿ ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದೆಡೆ ಇದ್ದ ಹಸಿರು ಕವಚವನ್ನು ಕಳೆದುಕೊಳ್ಳುತ್ತಾ ವಾಯು ಶುದ್ಧೀಕರಣಕ್ಕೆ ಕೃತಕ ಯಂತ್ರಗಳ ಮೊರೆ ಹೋಗುವುದು ತರವೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಹಬ್ಬಗಳಲ್ಲಿ ಬಳಸುವ ಪಟಾಕಿ ಯಿಂದ ಕೂಡಾ ನಗರ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಹಸಿರು ಪಟಾಕಿಯನ್ನು ಅನಾವರಣ ಮಾಡಿದರೂ ಅದು ನಮ್ಮ ನಗರಕ್ಕೆ ಇನ್ನೂ ಬಂದಿಲ್ಲ. ಇದರಿಂದಾಗಿ ಹಬ್ಬಗಳ ದಿನಗಳಲ್ಲಿ ಸಿಡಿಸುವ ಪಟಾಕಿ ಹೊರಸೂಸುವ ಹೊಗೆಯಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ.

ಮಾಲಿನ್ಯ: ನಗರಕ್ಕೆ 5ನೇ ಸ್ಥಾನ
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ ದೇಶದ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು 5ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ನವದೆಹಲಿ, ಎರಡನೇ ಸ್ಥಾನದಲ್ಲಿ ಮುಂಬೈ, ಮೂರನೇ ಸ್ಥಾನದಲ್ಲಿಕೋಲ್ಕತ್ತ ಹಾಗೂ ನಾಲ್ಕನೇ ಸ್ಥಾನದಲ್ಲಿ ಹೈದರಾಬಾದ್ ಇದೆ.

‘ನಮ್ಮ ನಗರ ಕೂಡಾ ನವದೆಹಲಿಯ ಹಾದಿಯಲ್ಲಿಯೇ ಸಾಗುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ದುರ್ಬಲವಾಗಿರುವ ರಾಜ್ಯಗಳಲ್ಲಿ ಮಾಲಿನ್ಯದ ಪ್ರಮಾಣ ಅಧಿಕವಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ಹೈದರಾಬಾದ್‌ನಲ್ಲಿ ಒಟ್ಟು ಮಾಲಿನ್ಯ ಪ್ರಮಾಣದಲ್ಲಿ ಶೇ 54ರಷ್ಟು ವಾಹನಗಳು ಹೊರಸೂಸುವ ಹೊಗೆ ಕಾರಣವಾಗಿದೆ. ಅದೇ ರೀತಿ, ಬೆಂಗಳೂರಿನಲ್ಲಿ ಶೇ 43ರಷ್ಟು ಮಾಲಿನ್ಯ ವಾಹನಗಳಿಂದಲೇ ಆಗುತ್ತಿದೆ’ ಎಂದುಐಐಎಸ್‌ಸಿ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ತಿಳಿಸಿದರು.

‘ಮಾಲಿನ್ಯ ತಡೆಗೆ ಕ್ರಿಯಾಯೋಜನೆ’
‘ವಾಯುಮಾಲಿನ್ಯ ನಿಯಂತ್ರಣ ಮಾಡಲು ಜನರ ಸಹಕಾರ ಕೂಡಾ ಅಗತ್ಯ.ಮಾಲಿನ್ಯ ಮುಕ್ತ ನಗರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಿಯಾಯೋಜನೆ ರೂಪಿಸಿ, ಅನುಷ್ಠಾನ ಮಾಡಲಾಗುತ್ತಿದೆ. ದೂಳು ಇರುವ ರಸ್ತೆಗಳಿಗೆ ನೀರು ಸಿಂಪಡಿಸುವಿಕೆ, ವಿದ್ಯುತ್ ಚಾಲಿನ ವಾಹನಗಳ ಬಳಕೆ, ಖಾಲಿ ಪ್ರದೇಶದಲ್ಲಿ ಗಿಡಗಳನ್ನು ಬೆಳೆಸುವಿಕೆ, ಉದ್ಯಾನಗಳ ನಿರ್ಮಾಣ, ವಾಹನಗಳ ಹೊಗೆ ತಪಾಸಣೆ ಸೇರಿದಂತೆ ವಿವಿಧ ಕ್ರಮವನ್ನು ಕೈಗೊಳ್ಳುವಂತೆ ವಿವಿಧ ಇಲಾಖೆಗಳಿಗೆ ಸೂಚಿಸಲಾಗಿದೆ’ ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಬಸವರಾಜ್ ಪಾಟೀಲ ತಿಳಿಸಿದರು.

‘ವಾಯುಮಾಲಿನ್ಯ ತಡೆಗೆ ಮೇಲ್ವಿಚಾರಣೆ, ರಕ್ಷಣಾ ಸಿಬ್ಬಂದಿ ನೇಮಕ, ಸಿಸಿ ಟಿ.ವಿ ಕ್ಯಾಮರಾ ಅಳವಡಿಕೆಯಂತಹ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನಾವು ಬಿಟ್ಟು ಹೋಗಬೇಕಿದೆ. ನಗರದಲ್ಲಿ ಚೆನ್ನಾಗಿ ಮಳೆಯಾಗುತ್ತಿರುವುದರಿಂದ ಮಾಲಿನ್ಯ ಕಡಿಮೆಯಾಗುತ್ತಿದೆ’ ಎಂದರು.

‘ಹೃದಯ ಕಾಯಿಲೆಗೂ ಕಾರಣ’
ವಾಯುಮಾಲಿನ್ಯದಿಂದ ಯುವಜನತೆ ಹೃದಯ ಸಮಸ್ಯೆ ಎದುರಿಸುತ್ತಿರುವುದುಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ. ‘ಯಾವುದೇ ಕಾಯಿಲೆ ಹಾಗೂ ವ್ಯಸನ ಇಲ್ಲದಿದ್ದರೂ ಕಿರಿಯ ವಯಸ್ಸಿನಲ್ಲೇ ಹೃದಯಾಘಾತ ಕಾಣಿಸಿಕೊಳ್ಳಲು ವಾಯುಮಾಲಿನ್ಯವೇ ಪ್ರಮುಖ ಕಾರಣ’ಎಂದು ವೈದ್ಯರು ತಿಳಿಸಿದ್ದಾರೆ.

‘ವಾಯುಮಾಲಿನ್ಯದಿಂದ ಉಸಿರಾಟದ ಸಮಸ್ಯೆಗಳು ಮಾತ್ರ ಕಾಣಿಸಿಕೊಳ್ಳುತ್ತದೆ ಎಂದು ಬಹುತೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.ಹೃದಯಾಘಾತಕ್ಕೆ ಕೂಡಾ ವಾಯುಮಾಲಿನ್ಯ ಪ್ರಮುಖ ಕಾರಣವಾಗಿದೆ. ಬೆಂಗಳೂರಿನಂತಹ ಮಹಾನಗರದ ಸಂಚಾರ ಸಿಗ್ನಲ್‌ಗಳಲ್ಲಿ 5 ನಿಮಿಷ ನಿಂತರೆ 5 ಸಿಗರೇಟ್‌ ಸೇದಿದಷ್ಟು ಮಾಲಿನ್ಯ ದೇಹ ಸೇರಲಿದೆ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ಮಾಲಿನ್ಯ ನಿಯಂತ್ರಣ ಹೇಗೆ ಸಾಧ್ಯ?
* ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಯಾದ ಮೆಟ್ರೊ, ಬಸ್‌ಗಳ ಬಳಕೆಗೆ ಆದ್ಯತೆ ನೀಡಬೇಕು
* ಕಸದ ರಾಶಿಗಳನ್ನು ಸುಡುವುದನ್ನು ಬಿಟ್ಟು, ವೈಜ್ಞಾನಿಕ ವಿಧಾನದಿಂದ ವಿಲೇವಾರಿಗೆ ಕ್ರಮಕೈಗೊಳ್ಳಬೇಕು
* ನಗರದ ಎಲ್ಲೆಡೆ ಗಿಡಗಳನ್ನು ಬೆಳೆಸಬೇಕು
* ಕಟ್ಟಡಗಳು ಸೇರಿದಂತೆ ವಿವಿಧ ಕಾಮಗಾರಿ ನಡೆಸುವ ವೇಳೆ ದೂಳು ಆಗದಂತೆ ಕ್ರಮ ಕೈಗೊಳ್ಳಬೇಕು
* ಎಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು
* ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಬಳಕೆಯನ್ನು ಕಡಿಮೆ ಮಾಡಬೇಕು
* ಅವಧಿ ಮೀರಿದ ವಾಹನಗಳು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.