
ಬೆಂಗಳೂರು: ನಗರದ ರಸ್ತೆಗಳ ಜಂಕ್ಷನ್ ಅಭಿವೃದ್ಧಿಯಲ್ಲಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿರುವ ಬಿಬಿಎಂಪಿ, ವಾಯುಗುಣಮಟ್ಟ ವೃದ್ಧಿಗಾಗಿ ಜಂಕ್ಷನ್ ಅಭಿವೃದ್ಧಿ ಮಾಡುವುದಾಗಿ ಹೇಳಿಕೊಂಡಿದೆ.
‘ಪ್ರಮುಖ 20 ಜಂಕ್ಷನ್‌ಗಳ ಸುತ್ತಮುತ್ತ ಹಸಿರೀಕರಣದೊಂದಿಗೆ ವಾಯುಗುಣಮಟ್ಟ ವೃದ್ಧಿಸಲು ಅಭಿವೃದ್ಧಿ’ ಎಂಬ ಹೆಸರಿನಲ್ಲಿ ₹18 ಕೋಟಿ ವೆಚ್ಚ ಮಾಡಲು ಮುಂದಾಗಿದ್ದು, ಟೆಂಡರ್ ಆಹ್ವಾನಿಸಿದೆ. ಜೂನ್ 21ಕ್ಕೆ ಟೆಂಡರ್ ತೆರೆಯಲಾಗುತ್ತಿದೆ. ಗುತ್ತಿಗೆ ನೀಡಿದ 11 ತಿಂಗಳ ಅವಧಿಯಲ್ಲಿ ಈ ಜಂಕ್ಷನ್‌ಗಳ ಅಭಿವೃದ್ಧಿ ಮುಗಿಯಲಿದೆ ಎಂದು ತಿಳಿಸಲಾಗಿದೆ.
ನಗರದಲ್ಲಿ ಈಗಾಗಲೇ 25 ಜಂಕ್ಷನ್‌ಗಳ ಅಭಿವೃದ್ಧಿ 2023ರ ಜನವರಿಯಲ್ಲಿ ಆರಂಭವಾಗಿದ್ದರೂ ಇನ್ನೂ ಮುಗಿದಿಲ್ಲ. ಕಳಾಹೀನಗೊಂಡಿದ್ದ ಸ್ಥಳಗಳ ಸ್ಪರೂಪ ಬದಲಿಸಿ, ನಾಗರಿಕರಿಗೆ ತಂಪನೆಯ ತಾಣವಾಗಬೇಕಿದ್ದ ಈ ಜಂಕ್ಷನ್‌ಗಳ ಕಾಮಗಾರಿ ವಿಳಂಬವಾಗುತ್ತಿದೆ. ಈ ಬಗ್ಗೆ ‘ಪ್ರಜಾವಾಣಿ’ ಮೇ 31ರಂದು ‘ಬಿಲ್ ವಿಳಂಬ: ಜಂಕ್ಷನ್ ಅಭಿವೃದ್ಧಿ ಕುಂಠಿತ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಅದಾದ ನಂತರ 25 ಜಂಕ್ಷನ್‌ಗಳ ಕಾಮಗಾರಿ ಸ್ವಲ್ಪ ಚುರುಕುಗೊಂಡಿದೆ. ಇದರ ಮಧ್ಯೆ ಜೂನ್ 6ರಂದು 20 ಜಂಕ್ಷನ್‌ಗಳ ಅಭಿವೃದ್ಧಿಗೆ ಟೆಂಡರ್ ಕರೆದಿದೆ.
ವಾಯುಗುಣಮಟ್ಟ ವೃದ್ಧಿ ಹಾಗೂ ಹಸಿರೀಕರಣದ ಹೆಸರಿನಲ್ಲಿರುವ 20 ಜಂಕ್ಷನ್‌ಗಳ ಅಭಿವೃದ್ಧಿಯ ಕಾಮಗಾರಿಗಳಲ್ಲಿ ಸಿವಿಲ್ ಕೆಲಸಗಳಿಗೇ ಸಿಂಹಪಾಲು. ಜಂಕ್ಷನ್‌ಗಳ ಸುತ್ತಮುತ್ತಲ ಚರಂಡಿಗಳ ಹೂಳು ತೆಗೆಯುವುದು, ಚರಂಡಿ ಮರು ಅಭಿವೃದ್ಧಿ, ಈಗಿರುವ ಪಾದಚಾರಿ ರಸ್ತೆಯನ್ನು ತೆರವುಗೊಳಿಸುವುದು, ತಡೆಗೋಡೆಗಳಿಗೆ ಗ್ರಾನೈಟ್ ಕ್ಲಾಡಿಂಗ್, ಕ್ಯಾನೊಪಿ ರಚನೆ, ರ‍್ಯಾಂಪ್ ನಿರ್ಮಾಣ, ಆಸನಗಳ ವ್ಯವಸ್ಥೆ, ಆಕರ್ಷಕ ದೀಪಾಲಂಕಾರ, ಫಲಕಗಳ ಅಳವಡಿಕೆ, ರಸ್ತೆಗಳಲ್ಲಿ ಲೇನ್ ಗುರುತಿಸುವ ಕಾಮಗಾರಿಗಳೂ ಸೇರಿವೆ. ಇದರೊಂದಿಗೆ ಜಂಕ್ಷನ್‌ಗಳಲ್ಲಿ ಇರುವ ಮರಗಳ ಬೆಳವಣಿಗೆಗೆ ಪೂರಕ ಮಣ್ಣು, ವಿನ್ಯಾಸ, ಹೊಸ ಗಿಡಗಳನ್ನು ನೆಡುವುದು, ಹೂವು, ಆಲಂಕಾರಿಕ ಗಿಡಗಳನ್ನು ನೆಡುವ ಕಾರ್ಯಗಳನ್ನು ಕೊನೆಯಲ್ಲಿ ಗುರುತಿಸಲಾಗಿದೆ.
ಮರ ತೆರವಿಲ್ಲ: ವಾಯುಗುಣಮಟ್ಟ ವೃದ್ಧಿ ಸೇರಿದಂತೆ ಜಂಕ್ಷನ್‌ಗಳಲ್ಲಿ ಹಸಿರೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಹೂವಿನ ಗಿಡಗಳನ್ನು ಹಾಕಲಾಗುತ್ತದೆ. ಜಂಕ್ಷನ್‌ಗಳ ಅಭಿವೃದ್ಧಿ ಸಂದರ್ಭದಲ್ಲಿ ಆ ಸ್ಥಳದಲ್ಲಿರುವ ಮರಗಳನ್ನು ತೆರವುಗೊಳಿಸಿದೆ, ಅವುಗಳನ್ನು ಒಳಗೊಂಡು ವಿನ್ಯಾಸ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಹೇಳಿದರು.
ನಗರ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದ ಬಳಿಯ ಸಂಗೊಳ್ಳಿ ರಾಯಣ್ಣ ಜಂಕ್ಷನ್ ಅನ್ನು ‘ಮರು ಉನ್ನತೀಕರಿಸುವ’ ಕಾಮಗಾರಿಯೂ ‘ವಾಯುಗುಣಮಟ್ಟ ವೃದ್ಧಿ’ ಯೋಜನೆಯಲ್ಲಿದೆ. ಈ ಜಂಕ್ಷನ್ ಅನ್ನು ಈಗಾಗಲೇ ಸಾಕಷ್ಟು ಅಭಿವೃದ್ಧಿ ಮಾಡಲಾಗಿದ್ದು ಅಲ್ಲಿ ಅಲಂಕಾರಿಕ ಗಿಡಗಳನ್ನು ನೆಟ್ಟು ‘ಲಾನ್’ ಕೂಡ ಹಾಕಲಾಗಿದೆ. ಆದರೆ ಇದೀಗ ಆ ಜಂಕ್ಷನ್‌ನ ಇನ್ನಿತರ ಪ್ರದೇಶಗಳನ್ನು ಸೇರಿಸಿಕೊಂಡು ಕಾರಂಜಿಯನ್ನು ನಿರ್ಮಿಸಲು ಯೋಜಿಸಲಾಗಿದೆ. ಮೈಸೂರು ರಸ್ತೆಯ ಜ್ಞಾನಭಾರತಿ ಜಂಕ್ಷನ್‌ನಲ್ಲಿ ಕೂಡ ನಮ್ಮ ಮೆಟ್ರೊ ಕಾಮಗಾರಿ ಮುಗಿದ ಮೇಲೆ ಜಂಕ್ಷನ್ ಅಭಿವೃದ್ಧಿಯಾಗಿದೆ. ‘ವಾಯುಗುಣಮಟ್ಟ ವೃದ್ಧಿ’ ಯೋಜನೆಯಲ್ಲಿ ಈ ಜಂಕ್ಷನ್ ಅನ್ನೂ ಸೇರಿಸಿಕೊಳ್ಳಲಾಗಿದ್ದು ಸುತ್ತಮುತ್ತಲ ಇನ್ನಷ್ಟು ಪ್ರದೇಶವನ್ನು ಸೇರಿಸಿಕೊಳ್ಳಲಾಗಿದೆ. ‘ಈ ಮೊದಲು ಜಂಕ್ಷನ್‌ನಲ್ಲಿ ಮಧ್ಯಭಾಗ ಮಾತ್ರ ಅಭಿವೃದ್ಧಿ ಮಾಡಲಾಗಿತ್ತು. ಈ ಯೋಜನೆಯಲ್ಲಿ ಸುತ್ತಮುತ್ತಲಿನ ಪ್ರದೇಶವನ್ನೂ ಹಸಿರೀಕರಣ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಎಂಜಿನಿಯರ್‌ಗಳು ತಿಳಿಸಿದರು.
ಟ್ಯಾಗೋರ್ ವೃತ್ತ ಬಸವನಗುಡಿ ಡೇರಿ ವೃತ್ತ ಕೆಎಂಎಫ್ ಟಿಸಿ ಪಾಳ್ಯ ಜಂಕ್ಷನ್ ಚಿಕ್ಕಬಸವನಪುರ ಜೆಡಿ ಮರ ಜಂಕ್ಷನ್ ಜೆ.ಪಿ. ನಗರ ನಾಗರಬಾವಿ 12ನೇ ಬ್ಲಾಕ್ ಬಸ್‌ನಿಲ್ದಾಣ ಟಿಸಿ ಪಾಳ್ಯ ಮುಖ್ಯರಸ್ತೆ ಬ್ರಿಡ್ಜ್ ಎಸ್‌ಪಿ ರಸ್ತೆ ಜಂಕ್ಷನ್ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಮಾಧವನ್ ವೃತ್ತ ಜಯನಗರ ಮುದಲಿಯಾರ್ ವೃತ್ತ (ಹಲಸೂರು ಕೆರೆ) ವೆಂಕಟಾಚಲಂ ವೃತ್ತ (ಹಲಸೂರು ಕೆರೆ) ಮದ್ರಾಸ್ ಸ್ಯಾಪರ್ಸ್ ಎಚ್‌ಕ್ಯೂ ಜಂಕ್ಷನ್ (ಹಲಸೂರು ಕೆರೆ) ಡಿ. ಭಾಸ್ಕರನ್ ರಸ್ತೆ ಜಂಕ್ಷನ್ (ಹಲಸೂರು ಕೆರೆ) ಮೇಖ್ರಿ ವೃತ್ತ ಬಳ್ಳಾರಿ ರಸ್ತೆ ಜ್ಞಾನಭಾರತಿ ವೃತ್ತ ಮೈಸೂರು ರಸ್ತೆ ನಂಜಪ್ಪ ವೃತ್ತ ಲಾಂಗ್‌ಫೋರ್ಡ್ ರಸ್ತೆ ಕೋಣನಕುಂಟೆ ಕ್ರಾಸ್ ಕನಕಪುರ ರಸ್ತೆ ಸುಬ್ರಮಣ್ಯಪುರ ರಸ್ತೆ ಜಂಕ್ಷನ್ ಸಿಎನ್‌ಆರ್ ರಾವ್ ಅಂಡರ್‌ಪಾಸ್ ಜಂಕ್ಷನ್ ಮಲ್ಲೇಶ್ವರ ಇಬ್ಲೂರು ಕೆರೆ ಜಂಕ್ಷನ್ ಹೊರವರ್ತುಲ ರಸ್ತೆ ಸಂಗೊಳ್ಳಿರಾಯಣ್ಣ ಜಂಕ್ಷನ್ ನಗರ ರೈಲು ನಿಲ್ದಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.