ADVERTISEMENT

ಐರಾವತ ಯೋಜನೆ: ನಕಲಿ ಆದೇಶ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 4 ಮೇ 2024, 16:16 IST
Last Updated 4 ಮೇ 2024, 16:16 IST
   

ಬೆಂಗಳೂರು: ಲಘು ವಾಹನ ಚಾಲನಾ ಪರವಾನಗಿ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲು ರೂಪಿಸಿರುವ ‘ಐರಾವತ ಯೋಜನೆ’ ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿಸಲಾಗಿದ್ದು, ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಬಾಗೇವಾಡಿ ಅವರು ದೂರು ನೀಡಿದ್ದಾರೆ. ‘ಕೆಲ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅವರ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಿಗಮದಿಂದ ಅರ್ಹ ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. 2018–19 ಹಾಗೂ 2019–20ನೇ ಸಾಲಿನಲ್ಲಿ ಪ್ರವಾಸಿ ಟ್ಯಾಕ್ಸಿಗಳಿಗಾಗಿ ₹ 5 ಲಕ್ಷ ಮಂಜೂರಾಗಿರುವ ಬಗ್ಗೆ ನಕಲಿ ಆದೇಶಗಳನ್ನು ಸೃಷ್ಟಿಸಿ ಯಾದಗಿರಿ ಜಿಲ್ಲೆಯ 17 ಜನರಿಗೆ ವಿತರಿಸಲಾಗಿದೆ. ಆದೇಶ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ’ ಎಂದು ತಿಳಿಸಿದರು.

ADVERTISEMENT

‘ಜನರಿಂದ ಹಣ ಪಡೆದಿರುವ ಕೆಲವರು, ನಕಲಿ ಆದೇಶ ನೀಡಿ ವಂಚಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕೃತ್ಯದಲ್ಲಿ ಕೆಲ ಚಾಲಕರು, ಸಿಬ್ಬಂದಿ ಭಾಗಿಯಾಗಿರುವ ಶಂಕೆಯು ಇದೆ. ವಿಚಾರಣೆ ಬಳಿಕ, ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.