ADVERTISEMENT

‘ವಿಮಾನನಿಲ್ದಾಣ: ಪರ್ಯಾಯ ರಸ್ತೆ ದುರಸ್ತಿ ಆಗಲಿ’

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 21:18 IST
Last Updated 18 ಆಗಸ್ಟ್ 2020, 21:18 IST

ಬೆಂಗಳೂರು: ‘ವಿಮಾನ ನಿಲ್ದಾಣಕ್ಕೆ ಹೆಣ್ಣೂರು ಮೂಲಕ ಸಂಪರ್ಕ ಕಲ್ಪಿಸುವ ರಸ್ತೆ ಪೂರ್ತಿ ಹದಗೆಟ್ಟಿದೆ. ಅದನ್ನು ಶೀಘ್ರ ದುರಸ್ತಿ ಪಡಿಸಿ’ ಎಂದು ವಿಧಾನ ಪರಿಷತ್‌ ಸದಸ್ಯ ರಮೇಶ ಗೌಡ ಗಮನ ಸೆಳೆದರು.

‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಥಣಿಸಂದ್ರ ನಾಗವಾರ ರಸ್ತೆ ಗುಂಡಿಮಯ’ ಶೀರ್ಷಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಉಲ್ಲೇಖಿಸಿ ಮಾತನಾಡಿದ ಅವರು, ‘ಈ ಹದಗೆಟ್ಟ ರಸ್ತೆಯಿಂದಾಗಿ ಅನೇಕರಿಗೆ ಸಮಸ್ಯೆ ಆಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌, ‘ನಾಗವಾರ ಜಂಕ್ಷನ್‌ನಿಂದ ರೇವಾ ಕಾಲೇಜಿನವರೆಗೆ ರಸ್ತೆ ದುರಸ್ತಿಗೆ ಟೆಂಡರ್‌ ಕರೆಯಲಾಗಿದೆ. ಇಲ್ಲಿ ಒಳಚರಂಡಿ ಕಾಮಗಾರಿ ಬಾಕಿ ಇದ್ದು, ಅದು ಮುಗಿದ ಬಳಿಕ ರಸ್ತೆ ದುರಸ್ತಿ ಕೆಲಸ ನಡೆಯಲಿದೆ’ ಎಂದರು.

ADVERTISEMENT

‘ಇಲ್ಲಿ ರಸ್ತೆ ಪರಿಶೀಲನೆ ನಡೆಸಿ ದುರಸ್ತಿಗೆ ಕ್ರಮಕೈಗೊಳ್ಳುತ್ತೇವೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಭರವಸೆ ನೀಡಿದರು.

‘ಟ್ಯಾಂಕರ್‌ ಮಾಫಿಯಾ ಮಟ್ಟಹಾಕಿ’
‘ನಗರದಲ್ಲಿ ಟ್ಯಾಂಕರ್‌ ಮಾಫಿಯಾ ಆಳವಾಗಿ ಬೇರುಬಿಟ್ಟಿದೆ. ಟ್ಯಾಂಕರ್‌ ಮಾಲೀಕರು ವಾಟರ್‌ ಮ್ಯಾನ್‌ಗಳ ಜೊತೆ ಶಾಮಿಲಾಗಿ ಸಮರ್ಪಕವಾಗಿ ನೀರು ಪೂರೈಕೆ ಆಗದಂತೆ ನೋಡಿಕೊಂಡು ಬಡವರ ರಕ್ತ ಹೀರುತ್ತಿದ್ದಾರೆ. ಅವರಿಗೆ ಮಾನವೀಯತೆಯೇ ಇಲ್ಲ’ ಎಂದು ರಮೇಶ್‌ ಗೌಡ ದೂರಿದರು.

‘ಕಮ್ಮನಹಳ್ಳಿ ವಾರ್ಡ್‌ನ ಗುಳ್ಳಪ್ಪ ವೃತ್ತದ ಬಳಿ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಬೋರ್‌ವೆಲ್‌ ಹಾಕಿ ಮಾರಾಟ ಮಾಡುತ್ತಿದ್ದಾರೆ. ಬೆಸ್ಕಾಂನವರು ದಂಡ ವಿಧಿಸಿದ ಬಳಿಕವೂ ಆ ಬೋರ್‌ವೆಲ್‌ನಿಂದ ನೀರು ಎತ್ತಿ ಮಾರಾಟ ಮಾಡುತ್ತಿದ್ದಾರೆ’ ಎಂದರು.

‘ಟ್ಯಾಂಕರ್‌ನವರು ಇಷ್ಟ ಬಂದ ದರಕ್ಕೆ ನೀರು ಮಾರಾಟ ಮಾಡುತ್ತಿದ್ದಾರೆ. ಖಾಸಗಿ ಟ್ಯಾಂಕರ್‌ಗಳು ವಿಧಿಸುವ ದರಕ್ಕೆ ಮಿತಿ ನಿಗದಿಪಡಿಸಿ, ಈ ಮಾಫಿಯಾಕ್ಕೆ ಕಡಿವಾಣ ಹಾಕಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.