ADVERTISEMENT

ಹುಲ್ಲು ಬೆಳೆದಿದ್ದ ಪ್ರದೇಶದಿಂದ ಹಾರಿದ ವಿಮಾನ

ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ಅವಘಡ; ತನಿಖೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 22:33 IST
Last Updated 14 ನವೆಂಬರ್ 2019, 22:33 IST
ಗೋಏರ್ ವಿಮಾನದ ಚಕ್ರದಲ್ಲಿದ್ದ ಹುಲ್ಲು
ಗೋಏರ್ ವಿಮಾನದ ಚಕ್ರದಲ್ಲಿದ್ದ ಹುಲ್ಲು   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ಗೋಏರ್‌ ಕಂಪನಿಯ ‘ಏರ್‌ಬಸ್‌ ಎ320’ ವಿಮಾನ ರನ್‌ವೇಯಿಂದ ಜಾರಿ ಹುಲ್ಲು ಬೆಳೆದಿದ್ದ ಪ್ರದೇಶಕ್ಕೆ ನುಗ್ಗಿ ಅಲ್ಲಿಂದಲೇ ಟೇಕಾಫ್‌ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸೋಮವಾರ ಈ ಅವಘಡ ಸಂಭವಿಸಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆ ಆರಂಭಿಸಿದೆ.

‘ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ 180 ಪ್ರಯಾಣಿಕರಿದ್ದರು. ಟೇಕಾ‍‍ಫ್‌ ಆಗಲು ವಿಮಾನ ರನ್‌ವೇಯಲ್ಲಿ ವೇಗವಾಗಿ ಹೊರಟಿತ್ತು. ಅದೇ ವೇಳೆ ರನ್‌ವೇ ದಾಟಿ ಹುಲ್ಲು ಬೆಳೆದಿದ್ದ ಪ್ರದೇಶಕ್ಕೆ ನುಗ್ಗಿತ್ತು. ಕೆಲ ದೂರದವರೆಗೆ ಸಾಗಿ ಅಲ್ಲಿಂದಲೇ ಟೇಕಾಫ್‌ ಆಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

‘ನಿಲ್ದಾಣದಲ್ಲಿ ಮಂಜು ಕವಿದ ವಾತಾವರಣವಿತ್ತು. ಪೈಲೆಟ್‌ಗಳಿಗೆ ರನ್‌ವೇ ಸ್ಪಷ್ಟವಾಗಿ ಕಂಡಿರಲಿಲ್ಲ. ಹೀಗಾಗಿಯೇ ಅವರು ರನ್‌ವೇ ಬಿಟ್ಟು ಮುಂದಕ್ಕೆ ವಿಮಾನ ಚಲಾಯಿಸಿಕೊಂಡು ಹೋಗಿರುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

‘ಹೈದರಾಬಾದ್‌ ನಿಲ್ದಾಣದಲ್ಲಿ ಇಳಿದಿದ್ದ ವಿಮಾನದ ಚಕ್ರಗಳಲ್ಲಿ ಹುಲ್ಲು ಕಂಡುಬಂದಿತ್ತು. ಅದನ್ನು ಗಮನಿಸಿ ಅನುಮಾನಗೊಂಡಿದ್ದ ಸಿಬ್ಬಂದಿ ವಿಚಾರಣೆ ನಡೆಸಿದಾಗಲೇ ವಿಷಯ ಗೊತ್ತಾಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.