ADVERTISEMENT

18 ಪ್ರಯಾಣಿಕರ ಗುದದ್ವಾರದಲ್ಲಿ 5 ಕೆ.ಜಿ ಚಿನ್ನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 16:41 IST
Last Updated 11 ಅಕ್ಟೋಬರ್ 2021, 16:41 IST

ಬೆಂಗಳೂರು: ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ 18 ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರಿಂದ 5 ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.

‘ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕರನ್ನು ತಪಾಸಣೆ ನಡೆಸಲಾಯಿತು. 18 ಪ್ರಯಾಣಿಕರ ಬಳಿ ₹ 2.40 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳು ಪತ್ತೆಯಾದವು’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘ದುಬೈ ಹಾಗೂ ಶಾರ್ಜಾದಿಂದ ಪ್ರತ್ಯೇಕ ವಿಮಾನಗಳಲ್ಲಿ ಪ್ರಯಾಣಿಕರು ನಗರ ನಿಲ್ದಾಣಕ್ಕೆ ಬಂದಿದ್ದರು. ಒಬ್ಬರಿಗೊಬ್ಬರು ಪರಿಚಯವಿಲ್ಲದವರಂತೆ ನಟಿಸಿ ನಿಲ್ದಾಣದಿಂದ ಹೊರಗೆ ಹೋಗಲು ಯತ್ನಿಸಿದ್ದರು. ಚಿನ್ನ ಸಾಗಣೆ ಬಗ್ಗೆ ಗುಪ್ತದಳದಿಂದ ಮಾಹಿತಿ ಬಂದಿದ್ದರಿಂದ, ಪ್ರತಿಯೊಬ್ಬ ಪ್ರಯಾಣಿಕರನ್ನು ತಡೆದು ತಪಾಸಣೆಗೆ ಒಳಪಡಿಸಲಾಯಿತು.’

ADVERTISEMENT

‘ಪ್ರಯಾಣಿಕರ ಬಳಿ ಚಿನ್ನವಿರುವುದು ಲೋಹ ಶೋಧಕದಿಂದ ತಿಳಿಯಿತು. ಆದರೆ, ಬಟ್ಟೆ ಹಾಗೂ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಚಿನ್ನ ಸಿಗಲಿಲ್ಲ. ಕೊನೆಗೆ, ಎಲ್ಲರನ್ನೂ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಪರಿಶೀಲಿಸಿದಾಗ ಗುದದ್ವಾರದಲ್ಲಿ ಚಿನ್ನವಿರುವುದು ತಿಳಿಯಿತು’ ಎಂದೂ ಮೂಲಗಳು ತಿಳಿಸಿವೆ.

ಚಿನ್ನ ಸಾಗಣೆ ಜಾಲ: ‘‍ವಶಕ್ಕೆ ಪಡೆದಿರುವ ಪ್ರಯಾಣಿಕರು, ತಮಿಳುನಾಡಿನವರು. ಆಗಾಗ ವಿದೇಶಕ್ಕೆ ಹೋಗಿ ಬರುತ್ತಿದ್ದರು. ಎಲ್ಲರೂ ಸಂಘಟಿತರಾಗಿ ಚಿನ್ನ ಸಾಗಣೆ ಜಾಲದಲ್ಲಿ ತೊಡಗಿರುವ ಮಾಹಿತಿ ಇದೆ’ ಎಂದು ಮೂಲಗಳು ಹೇಳಿವೆ.

‘ಬೆಂಗಳೂರು ಹಾಗೂ ಮಂಗಳೂರು ನಿಲ್ದಾಣದ ಮೂಲಕ ಹಲವು ಬಾರಿ ಚಿನ್ನ ಸಾಗಿಸಲಾಗಿದೆ. ಕೆಲವರು ಕಮಿಷನ್‌ ಪಡೆದು ಚಿನ್ನ ಸಾಗಿಸುತ್ತಿದ್ದರು ಎಂಬುದು ಗೊತ್ತಾಗಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.