ADVERTISEMENT

ಬೆಂಗಳೂರು ನಗರದಿಂದ ವಿಮಾನನಿಲ್ದಾಣಕ್ಕೆ ಇಂದಿನಿಂದ ರೈಲು

ಸಾರ್ವಜನಿಕ ಸೇವೆಗೆ ಕೆಐಎ ನಿಲುಗಡೆ ತಾಣ ಸಜ್ಜು

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 18:37 IST
Last Updated 3 ಜನವರಿ 2021, 18:37 IST
ದೇವನಹಳ್ಳಿಯಲ್ಲಿ ತಲೆ ಎತ್ತಿರುವ ಹಾಲ್ಟ್‌ ಸ್ಟೇಷನ್‌ನ ಹೊರನೋಟ
ದೇವನಹಳ್ಳಿಯಲ್ಲಿ ತಲೆ ಎತ್ತಿರುವ ಹಾಲ್ಟ್‌ ಸ್ಟೇಷನ್‌ನ ಹೊರನೋಟ   

ಬೆಂಗಳೂರು: ನಗರದ ಹೃದಯಭಾಗದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್‌ ಸ್ಟೇಷನ್‌ಗೆ (ಕೆಐಎಡಿ) ಸೋಮವಾರದಿಂದ ರೈಲು ಸೇವೆ ಆರಂಭವಾಗಲಿದೆ.

ಕೆಐಎ ಬಳಿಯ ಹಾಲ್‌ ಸ್ಟೇಷನ್‌ನಲ್ಲಿ ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ, ಟಿಕೆಟ್ ಕೌಂಟರ್‌ನಿಂದ ಹಿಡಿದು ಪ್ರತಿಯೊಂದು ಸೌಲಭ್ಯಗಳನ್ನೂ ಈಗಾಗಲೇ ಕಲ್ಪಿಸಲಾಗಿದೆ. ನಸುಕಿನ ಜಾವ 4.45ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ (ಕೆಎಸ್‌ಆರ್‌) ಹೊರಡುವ ಮೊದಲ ರೈಲು, 5.50ಕ್ಕೆ ಕೆಐಎಡಿ ತಲುಪಲಿದೆ.

ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ಈ ರೈಲುಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಅಂದರೆ, ಬೆಳಗಿನಜಾವ ಮತ್ತು ತಡರಾತ್ರಿ ಉಪನಗರ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಮೊದಲ ರೈಲಿನಲ್ಲೇ ವಿಮಾನ ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಸಂಸದ ಪಿ.ಸಿ. ಮೋಹನ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ.ಕೆ. ವರ್ಮ, ರೈಲ್ವೆ ಅಧಿಕಾರಿಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ADVERTISEMENT

ನಗರದ ಹೃದಯಭಾಗದಿಂದ ಏರ್‌ಪೋರ್ಟ್‌ಗೆ ವೋಲ್ವೊ ಬಸ್‌ನಲ್ಲಿ ತೆರಳಲು ₹270 ಆಗುತ್ತಿತ್ತು. ಟ್ಯಾಕ್ಸಿಗೆ ₹600 ರಿಂದ ₹1,000ದವರೆಗೆ ನೀಡಬೇಕಾಗಿತ್ತು. ಸಂಚಾರದಟ್ಟಣೆಯಿಂದಾಗಿ ಸಾಕಷ್ಟು ಸಮಯವೂ ವ್ಯರ್ಥವಾಗುತ್ತಿತ್ತು. ಆದರೆ, ಕೆಎಸ್‌ಆರ್‌ನಿಂದ ₹10, ಕಂಟೋನ್ಮೆಂಟ್‌ನಿಂದ ₹15ರಲ್ಲಿ ಹಾಲ್ಟ್‌ ಸ್ಟೇಷನ್ ತಲುಪಬಹುದಾಗಿದೆ. ಹಾಲ್‌ಸ್ಟೇಷನ್‌ನಿಂದ ವಿಮಾನ ನಿಲ್ದಾಣಕ್ಕೆ 5 ಕಿ.ಮೀ. ದೂರವಿದ್ದು, ಈಗಾಗಲೇ ಬಿಐಎಎಲ್‌ನಿಂದ ಉಚಿತವಾಗಿ ಷಟಲ್ ಬಸ್‌ ಸೇವೆಯ ವ್ಯವಸ್ಥೆ ಮಾಡಲಾಗಿದೆ.

ಸದ್ಯಕ್ಕೆ 50ರಿಂದ 60 ನಿಮಿಷಗಳ ಪ್ರಯಾಣ ಇದಾಗಿದೆ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು, ಮುಂದಿನ ದಿನಗಳಲ್ಲಿ ನೇರ ತಡೆರಹಿತ ರೈಲುಗಳನ್ನು ಪರಿಚಯಿಸುವ ಚಿಂತನೆಯೂ ಇದೆ. ಆಗ ಪ್ರಯಾಣ ಸಮಯವು ಅರ್ಧಕ್ಕರ್ಧ ತಗ್ಗಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದ್ದಾಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.