
ಭಾರತೀಯ ಸೇನೆ
ಬೆಂಗಳೂರು: ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಮತ್ತು ನಿವೃತ್ತ ಸಿಬ್ಬಂದಿಯ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುವ ಉದ್ದೇಶದಿಂದ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ಭಾರತೀಯ ಸೇನೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದ ಪ್ರಕಾರ ಸೈನಿಕರು ಸೇವೆಯಲ್ಲಿ ಇದ್ದಾಗ ಹುತಾತ್ಮರಾದರೆ, ಅವರ ಮಕ್ಕಳಿಗೆ ಶುಲ್ಕಗಳಲ್ಲಿ ಶೇ 100ರಷ್ಟು ವಿನಾಯಿತಿ ನೀಡಲಾಗುತ್ತದೆ. ಕೇವಲ ನೋಂದಣಿ ಶುಲ್ಕವನ್ನು ಪಡೆಯಲಾಗುತ್ತದೆ ಎಂದು ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್‌ನ ಶೈಕ್ಷಣಿಕ ಮುಖ್ಯಸ್ಥ ಧೀರಜ್ ಮಿಶ್ರಾ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಣೆ, ಸ್ಪರ್ಧಾತ್ಮಕ ಪರೀಕ್ಷೆಗೆ ಅವರನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿರುವ ಆಕಾಶ್, ದೇಶದಾದ್ಯಂತ 400ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಆ ಕೇಂದ್ರಗಳಲ್ಲಿ ಸೇನೆಯ ಸಿಬ್ಬಂದಿಯ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಸಿಬ್ಬಂದಿ ಶೇ 20ಕ್ಕಿಂತ ಹೆಚ್ಚು ಅಂಗವೈಕಲ್ಯಕ್ಕೆ ಒಳಗಾಗಿದ್ದರೆ, ಶೌರ್ಯ ಪ್ರಶಸ್ತಿ ಪಡೆದಿದ್ದರೆ ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ 100ರಷ್ಟು ವಿನಾಯಿತಿ ಸಿಗಲಿದೆ. ಅಲ್ಲದೆ ಸೇವೆಯಲ್ಲಿರುವ ಮತ್ತು ನಿವೃತ್ತ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿವೇತನದ ಜೊತೆಗೆ ಬೋಧನಾ ಶುಲ್ಕದಲ್ಲಿ ಶೇ 20ರಷ್ಟು ವಿನಾಯಿತಿ ನೀಡಲಾಗುತ್ತದೆ.
ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣವು ಬಲವಾದ ಅಡಿಪಾಯವಾಗಿದೆ. ಸೈನಿಕರ ತ್ಯಾಗವನ್ನು ಗೌರವಿಸಲು, ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮಾರ್ಗದರ್ಶನ ನೀಡಲು ಸೇನೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 8ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.