ADVERTISEMENT

ಹ್ಯೂಬ್ಲೊ ವಾಚ್‌ ಪ್ರಕರಣ ಆರ್‌ಟಿಐಗೆ ಅರ್ಜಿಗೆ ಸಲಹೆ

hublo watch

​ಪ್ರಜಾವಾಣಿ ವಾರ್ತೆ
Published 2 ಜುಲೈ 2018, 20:05 IST
Last Updated 2 ಜುಲೈ 2018, 20:05 IST
ಸಿದ್ದರಾಮಯ್ಯ (ಸಂಗ್ರಹ ಚಿತ್ರ).
ಸಿದ್ದರಾಮಯ್ಯ (ಸಂಗ್ರಹ ಚಿತ್ರ).   

ಬೆಂಗಳೂರು: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹ್ಯೂಬ್ಲೊ ವಾಚ್ ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆ ಬೇಕು ಎಂದಾದರೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮೂಲಕ ಅರ್ಜಿ ಸಲ್ಲಿಸಿ ಪಡೆಯಿರಿ’ ಎಂದು ದೂರುದಾರ ನಟರಾಜ್ ಶರ್ಮಾ ಅವರಿಗೆ ಹೈಕೋರ್ಟ್ ಸಲಹೆ ನೀಡಿದೆ.

‘ದೂರುದಾರರ ಹೇಳಿಕೆ ಪಡೆಯದೆ, ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಹ್ಯೂಬ್ಲೊ ವಾಚ್ ಪ್ರಕರಣದ ತನಿಖೆ ಪೂರ್ಣಗೊಳಿಸಿ, ಸಿದ್ದರಾಮಯ್ಯ ಅವರಿಗೆ ಕ್ಲೀನ್‌ ಚಿಟ್ ನೀಡಿದೆ. ಹೀಗಾಗಿ, ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ನಮಗೆ ಒದಗಿಸಲು ಎಸಿಬಿಗೆ ನಿರ್ದೇಶಿಸಬೇಕು’ ಎಂದು ಕೋರಿ ವಕೀಲ ನಟರಾಜ್ ಶರ್ಮಾ ರಿಟ್‌ ಅರ್ಜಿ ಸಲ್ಲಿಸಿದ್ದರು.

ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ‘ಇದನ್ನೆಲ್ಲಾ ನೀವು ಆರ್‌ಟಿಐ ಅಡಿಯಲ್ಲೇ ಕೇಳಬಹುದಲ್ಲಾ’ ಎಂದು ಪ್ರಶ್ನಿಸಿತು.

ADVERTISEMENT

ಇದಕ್ಕೆ ಉತ್ತರಿಸಿದ ನಟರಾಜ್‌ ಶರ್ಮಾ, ‘ಮೂರು ಬಾರಿ ಮನವಿ ಮಾಡಿದ್ದರೂ ಅದನ್ನು ಪರಿಗಣಿಸಿಲ್ಲ. ಆದ್ದರಿಂದ ಕೋರ್ಟ್ ಮೆಟ್ಟಿಲು ಹತ್ತಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲ ವಿ.ಶ್ರೀನಿಧಿ, ‘ಅರ್ಜಿದಾರರು ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದರೆ ಅದನ್ನು ಪರಿಶೀಲಿಸಲಾಗುವುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಅರ್ಜಿದಾರರು ಆರ್‌ಟಿಐ ಮೂಲಕ ಅರ್ಜಿ ಸಲ್ಲಿದರೆ, ಅದನ್ನು ಎಸಿಬಿ ಕಾನೂನು ಪ್ರಕಾರ ಪರಿಗಣಿಸಬೇಕು’ ಎಂದು ಸೂಚಿಸಿ, ಅರ್ಜಿ ವಿಲೇವಾರಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.