ADVERTISEMENT

ಎಲ್ಲ ಎಲೆಕ್ಟ್ರಿಕಲ್ ಕೇಬಲ್‌ಗಳೂ ಭೂಗತ: ಬಿಡಿಎ ಆಯುಕ್ತ ಕುಮಾರ್‌ ನಾಯಕ್‌

ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 20:58 IST
Last Updated 3 ಜನವರಿ 2023, 20:58 IST
ಕೆಂ‍ಪೇಗೌಡ ಬಡಾವಣೆಯಲ್ಲಿ ಯುಟಿಲಿಟಿ ಡಕ್ಟ್‌ ಕಾಮಗಾರಿಯನ್ನು ಆಯುಕ್ತ ಕುಮಾರ್‌ ನಾಯಕ್‌ ಮಂಗಳವಾರ ಪರಿಶೀಲಿಸಿ ಮಾತನಾಡಿದರು
ಕೆಂ‍ಪೇಗೌಡ ಬಡಾವಣೆಯಲ್ಲಿ ಯುಟಿಲಿಟಿ ಡಕ್ಟ್‌ ಕಾಮಗಾರಿಯನ್ನು ಆಯುಕ್ತ ಕುಮಾರ್‌ ನಾಯಕ್‌ ಮಂಗಳವಾರ ಪರಿಶೀಲಿಸಿ ಮಾತನಾಡಿದರು   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎಲೆಕ್ಟ್ರಿಕಲ್ ಕೇಬಲ್‌ಗಳು, ಬೀದಿ ದೀಪ ಸೇರಿ ಎಲ್ಲ ಕೇಬಲ್‌ಗಳನ್ನು ಭೂಗತವಾಗಿ ಯುಟಿಲಿಟಿ ಡಕ್ಟ್‌ನಲ್ಲಿ ಹಾಕಲಾಗಿದೆ. ಇಂಧನ ಉಳಿತಾಯ ಮತ್ತು ಪರಿಣಾಮಕಾರಿ ದೀಪಕ್ಕಾಗಿ ಸ್ಮಾರ್ಟ್ ಸ್ಟ್ರೀಟ್ ಲೈಟಿಂಗ್ ಅಳವಡಿಸಲಾಗುತ್ತದೆ ಎಂದು ಬಿಡಿಎ ಆಯುಕ್ತ ಕುಮಾರ್‌ ನಾಯಕ್‌ ಹೇಳಿದರು.

ಕೆಂ‍ಪೇಗೌಡ ಬಡಾವಣೆ ನಿರ್ಮಾಣದ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.

‘ನೀರು ಸರಬರಾಜು, ಮರುಬಳಕೆಯ ನೀರು ಸರಬರಾಜು, ಭೂಗತ ಒಳಚರಂಡಿ ಮತ್ತು ವಿದ್ಯುತ್ ಜಾಲ ಸೇರಿ ಒಟ್ಟು ಜಾಲವನ್ನು ಸ್ಕಾಡಾ (ಎಸ್‌ಸಿಎಡಿಎ–ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ) ಮೂಲಕ ನಿಯಂತ್ರಿಸಿ, ನಿರ್ವಹಣೆ ಮಾಡಲಾಗುತ್ತದೆ ಎಂದರು.

ADVERTISEMENT

2014ರಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗಿದ್ದು, ಸೀಗೇಹಳ್ಳಿ, ಕೊಡಿಗೇಹಳ್ಳಿ, ಕನ್ನೆಳ್ಳಿ, ಮಾಂಗನಹಳ್ಳಿ, ಕೆಂಚನಪುರ, ಸೂಳಿಕೆರೆ, ರಾಮಸಂದ್ರ, ಕೊಮ್ಮಘಟ್ಟ, ಕೋಮಘಟ್ಟ ಕೃಷ್ಣಸಾಗರ, ಭೀಮನಕುಪ್ಪೆ, ಚಲ್ಲಘಟ್ಟ, ಬಹಿಸ್ಸೆ ಗ್ರಾಮಗಳ 12 ಗ್ರಾಮಗಳನ್ನು ಒಳಗೊಂಡಿದೆ. ಒಟ್ಟು ವಿಸ್ತೀರ್ಣ 4,043 ಎಕರೆ. ಮೊದಲ ಹಂತದಲ್ಲಿ 2,252 ಎಕರೆಗಳಲ್ಲಿ 26,500 ನಿವೇಶನಗಳನ್ನು ರಚಿಸಲಾಗಿದೆ ಎಂದರು.

ಬೆಂಗಳೂರು-ಮೈಸೂರು ರಸ್ತೆಯಿಂದ ಬೆಂಗಳೂರು-ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಲೇಔಟ್‌ನ ಮಧ್ಯಭಾಗದಲ್ಲಿ 10.57 ಕಿ.ಮೀ. ಉದ್ದದ 100 ಮೀಟರ್ ಅಗಲದ ಮುಖ್ಯ ರಸ್ತೆ ಸಾಗಲಿದೆ. ಇದು ಎಲ್ಲ ಒಂಬತ್ತು ಬ್ಲಾಕ್‌ಗಳಿಗೆ ಪ್ರವೇಶ ಕಲ್ಪಿಸುತ್ತದೆ ಎಂದು ಹೇಳಿದರು.

ನೀರು ಸರಬರಾಜಿಗೆ 57.5 ಎಂಎಲ್ ಸಾಮರ್ಥ್ಯದ 4 ಜಿಎಲ್‌ಎಸ್‌ಆರ್‌ಗಳನ್ನು ನಿರ್ಮಿಸಲಾಗಿದೆ. ಸಂಸ್ಕರಿಸಿದ ನೀರು ಸರಬರಾಜಿಗೆ ಎಂಟು ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ. ತೋಟಗಾರಿಕೆ, ಫ್ಲಶಿಂಗ್ ಮತ್ತು ಯಾವುದೇ ಇತರ ಕುಡಿಯಲು ಯೋಗ್ಯವಲ್ಲದ ಉದ್ದೇಶಕ್ಕೆ ಇದನ್ನು ಸರಬರಾಜು ಮಾಡಲಾಗುತ್ತದೆ. ಮನೆಯಿಂದ ಬರುವ ಕೊಳಚೆ ನೀರನ್ನು ಸಂಸ್ಕರಿಸಲು 10 ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ ಎಂದರು.

ಕೆಂಪೇಗೌಡ ಬಡಾವಣೆ ಅಭಿವೃದ್ಧಿಯ ಯೋಜನೆಯನ್ನು ಪರಿಶೀಲಿಸಲು ವಾರಕ್ಕೊಮ್ಮೆ ಸಭೆ ನಡೆಸಲಾಗುತ್ತಿದೆ. ಸಂಪರ್ಕಕ್ಕೆ ಸಂಬಂಧಿಸಿದ ಭೂಸ್ವಾಧೀನ ಸಮಸ್ಯೆಗಳು ಮತ್ತು ಭೂಮಿ ಸಡಿಲವಾದ ರೈತರಿಗೆ ಸೈಟ್ ಹಂಚಿಕೆಯ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಎಂಎಆರ್ ಕಾಮಗಾರಿಗಳು, ಲೇಔಟ್ ಕಾಮಗಾರಿಗಳು ಮತ್ತು ಯುಟಿಲಿಟಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.