ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನರೇಗಾ ಯೋಜನೆಯ ಹೆಸರು ಹಾಗೂ ಅನುದಾನ ಹಂಚಿಕೆಯಲ್ಲಿ ಬದಲಾವಣೆ ಮಾಡಿರುವುದು ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಫೆಬ್ರುವರಿ 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ.
‘ಮುಷ್ಕರದ ಭಾಗವಾಗಿ ಜನವರಿ 21ರಂದು ಬೆಳಿಗ್ಗೆ 10ರಿಂದ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಮುಷ್ಕರದ ಸ್ವರೂಪ ಕುರಿತು ನಿರ್ಣಯ ಕೈಗೊಳ್ಳಲಾಗುವುದು’ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಜೆಸಿಟಿಯು– ಕರ್ನಾಟಕ) ಪ್ರಮುಖರಾದ ಕೆ.ವಿ.ಭಟ್ ಹಾಗೂ ಎಸ್.ವರಲಕ್ಷ್ಮಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕೇಂದ್ರ ಸರ್ಕಾರದ ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ ಕಾಯ್ದೆ, ವಿಮಾ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ತಿದ್ದುಪಡಿ ಕಾಯ್ದೆ, ಬೀಜ ಮಸೂದೆ, ಅರಾವಳಿ ಬೆಟ್ಟಗಳ ನಾಶದಂತಹ ಆದೇಶಗಳನ್ನು ವಿರೋಧಿಸಿ ಮುಷ್ಕರ ನಡೆಸಲಾಗುವುದು’ ಎಂದರು.
‘29 ಕಾರ್ಮಿಕ ಕಾಯ್ದೆಗಳಿಗೆ ತಿಲಾಂಜಲಿ ನೀಡಿ ಎರಡು ತಿಂಗಳ ಹಿಂದೆಯೇ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಂದಿರುವುದರಿಂದ ಕಾರ್ಮಿಕರ ಬದುಕಿಗೆ ಹೊಡೆತ ಬೀಳಲಿದೆ. ಯಾವುದೇ ಚರ್ಚೆಗೆ ಅವಕಾಶ ನೀಡದೇ ಸಂಹಿತೆ ಜಾರಿಗೊಳಿಸಲಾಗಿದೆ ಎಂದು ಟೀಕಿಸಿದರು.
‘ಕರ್ನಾಟಕ ಸರ್ಕಾರವು ಕಾರ್ಮಿಕ ವಿರೋಧಿ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು. ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕನಿಷ್ಠ ವೇತನ ಪರಿಷ್ಕರಣೆ ಜಾರಿಗೊಳಿಸಬೇಕು. ರಾಜ್ಯ ಕಾರ್ಮಿಕ ಸಮ್ಮೇಳನ ನಡೆಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.