ADVERTISEMENT

ಪ್ರಕರಣ ಬಾಕಿ ಇದ್ದರೂ ರಾಷ್ಟ್ರಪತಿ ಪದಕಕ್ಕೆ ಶಿಫಾರಸು ಪಟ್ಟಿಯಲ್ಲಿ ಅಲೋಕ್‌ ಹೆಸರು

ರಾಷ್ಟ್ರಪತಿ ಪದಕಕ್ಕೆ 32 ಪೊಲೀಸರ ಹೆಸರು ಶಿಫಾರಸು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:31 IST
Last Updated 11 ಡಿಸೆಂಬರ್ 2023, 16:31 IST
<div class="paragraphs"><p>ಅಲೋಕ್‌ ಕುಮಾರ್‌</p></div>

ಅಲೋಕ್‌ ಕುಮಾರ್‌

   

ಬೆಂಗಳೂರು: ಡಿಜಿಪಿ ಕೆ. ರಾಮಚಂದ್ರ ರಾವ್, ಎಡಿಜಿಪಿಗಳಾದ ಅಲೋಕ್‌ಕುಮಾರ್, ಪಿ. ಹರಿಶೇಖರನ್ ಹಾಗೂ ಸೌಮೇಂದು ಮುಖರ್ಜಿ ಸೇರಿ 32 ಪೊಲೀಸರ ಹೆಸರುಗಳನ್ನು 2024ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಫೋನ್‌ ಕದ್ದಾಲಿಕೆ, ಮಹಿಳೆ ಮೇಲೆ ಹಲ್ಲೆ, ₹1 ಕೋಟಿ ಲಂಚಕ್ಕೆ ಬೇಡಿಕೆ ಆರೋಪದ ಪ್ರಕರಣಗಳ ವಿಚಾರಣೆ ಬಾಕಿ ಇರುವಾಗಲೇ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಹೆಸರನ್ನು ಶಿಫಾರಸು ಮಾಡಲಾಗಿದೆ.

ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ ಆಯೋಜಿಸಲಾಗುತ್ತದೆ. ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪದಕ ಪ್ರದಾನ ಮಾಡಲಾಗುತ್ತದೆ.

ADVERTISEMENT

2024ನೇ ಸಾಲಿನ ಪದಕಕ್ಕೆ ಅರ್ಹರಿರುವ ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಟ್ಟಿಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗೆ ಕಳುಹಿಸಿದ್ದಾರೆ.

ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅಲೋಕ್‌ಕುಮಾರ್ ಲಭ್ಯರಾಗಲಿಲ್ಲ.

ಅಲೋಕ್‌ಕುಮಾರ್ ಮೇಲಿನ ಪ್ರಕರಣಗಳು:

* ಮಹಿಳೆ ಮೇಲೆ ಹಲ್ಲೆ: 2019ರಲ್ಲಿ ಅಲೋಕ್‌ಕುಮಾರ್ ಅವರು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದರು. ಈ ಸಂದರ್ಭದಲ್ಲಿ 50 ವರ್ಷದ ಮಹಿಳೆಯೊಬ್ಬರು ಕಚೇರಿಗೆ ಬಂದಿದ್ದರು. ‘ಸ್ವಯಂಸೇವಾ ಸಂಘಟನೆಯೊಂದರ ಮೇಲೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ’ ಎಂದು ಆರೋಪಿಸಿದ್ದರು. ತಮ್ಮ ಮೇಲೆ ಅಲೋಕ್‌ಕುಮಾರ್ ಹಲ್ಲೆ ಮಾಡಿ ಪ್ರಕರಣ ಹಿಂಪಡೆಯಲು ಜೀವ ಬೆದರಿಕೆಯೊಡ್ಡಿದ್ದರೆಂಬ ಆರೋಪದಡಿ ಮಹಿಳೆಯು 39ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು.

‘2019ರ ಫೆಬ್ರುವರಿ 11ರಂದು ಅಲೋಕ್‌ಕುಮಾರ್ ಕಚೇರಿಗೆ ಭೇಟಿ ನೀಡಿದ್ದೆ. ಇದೇ ಸಂದರ್ಭದಲ್ಲಿ ನನ್ನ ಮುಖ ಹಾಗೂ ಕಣ್ಣಿಗೆ ಅಲೋಕ್‌ಕುಮಾರ್ ಗುದ್ದಿದ್ದರು. ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದೆ. ಅಂದಿನ ಪೊಲೀಸ್ ಕಮಿಷನರ್ ಸುನೀಲ್‌ಕುಮಾರ್ ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದೆ. ಅವರು ಕ್ರಮ ಕೈಗೊಂಡಿರಲಿಲ್ಲ. 2019ರ ಮಾರ್ಚ್ 25ರಂದು ನನ್ನ ವಿರುದ್ಧವೇ ಅಲೋಕ್‌ ಕುಮಾರ್ ಪ್ರಕರಣ ದಾಖಲಿಸಿದ್ದರು’ ಎಂದು ಮಹಿಳೆ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ.

* ಲಂಚಕ್ಕೆ ಬೇಡಿಕೆ: ವೈಯಾಲಿಕಾವಲ್ ಠಾಣೆ ವ್ಯಾಪ್ತಿಯ ಬಾರ್‌ ಮತ್ತು ರೆಸ್ಟೊರೆಂಟ್‌ವೊಂದರಲ್ಲಿ 2015ರ ಮೇ 30ರಂದು ನಡೆದಿದ್ದ ಗಲಾಟೆ ಪ್ರಕರಣ ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿಗಳ ಮೂಲಕ ₹1 ಕೋಟಿ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪ ಅಲೋಕ್‌ಕುಮಾರ್ ಮೇಲಿತ್ತು. ಸಂತ್ರಸ್ತ ಮಲ್ಲಿಕಾರ್ಜುನ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಬಿ–ರಿಪೋರ್ಟ್ ಸಲ್ಲಿಸಿದ್ದರು.

* ಫೋನ್ ಕದ್ದಾಲಿಕೆ: 2019ರ ಆಗಸ್ಟ್ 2ರಂದು ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಐಪಿಎಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರನ್ನು ನಿಯೋಜಿಸಲಾಗಿತ್ತು. ಆಗಸ್ಟ್ 8ರಂದು ಮೊಬೈಲ್ ಸಂಭಾಷಣೆಯ ಆಡಿಯೊ ತುಣುಕುಗಳನ್ನು ಸುದ್ದಿ ವಾಹಿನಿ ಪ್ರಸಾರ ಮಾಡಿತ್ತು. ಭಾಸ್ಕರ್ ರಾವ್ ಅವರು ಫೋನ್ ಕದ್ದಾಲಿಕೆ ಸಂಬಂಧ ದೂರು ನೀಡಿದ್ದರು. ನಂತರ, ಸಿಬಿಐ ತನಿಖೆ ಆರಂಭವಾಗಿತ್ತು.

ಸಿಸಿಬಿ ಅಧಿಕಾರಿಗಳ ಮೂಲಕ ಅಲೋಕ್ ಕುಮಾರ್ ಫೋನ್ ಕದ್ದಾಲಿಕೆ ಮಾಡಿಸಿದ್ದರೆಂಬ ಆರೋಪವಿತ್ತು. ಅಲೋಕ್‌ ಕುಮಾರ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್​ ಸಲ್ಲಿಸಿತ್ತು. ಅದನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಪ್ರಕರಣ ಸಂಬಂಧ ತನಿಖೆ ಮುಂದುವರಿಸಲು ನ್ಯಾಯಾಲಯ ಸೂಚಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

ಅಲೋಕ್‌ ಕುಮಾರ್‌

ಪಿ. ಹರಿಶೇಖರನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.