ADVERTISEMENT

ಪೀಣ್ಯ ಮೇಲ್ಸೇತುವೆ: ಸಿಗದ ‘ಗ್ರೀನ್‌ ಸಿಗ್ನಲ್‌’

400 ಕೇಬಲ್ ಬದಲಾವಣೆ ಮಾಡಿದ್ದರೂ ಭಾರಿ ವಾಹನ ಸಂಚಾರಕ್ಕೆ ಅನುಮತಿ ಇಲ್ಲ

ಆದಿತ್ಯ ಕೆ.ಎ
Published 4 ಜೂನ್ 2024, 0:00 IST
Last Updated 4 ಜೂನ್ 2024, 0:00 IST
ಪೀಣ್ಯ ಮೇಲ್ಸೇತುವೆ
ಪೀಣ್ಯ ಮೇಲ್ಸೇತುವೆ   

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ–4ರ ತುಮಕೂರು ರಸ್ತೆಯಲ್ಲಿರುವ ಪೀಣ್ಯ ಮೇಲ್ಸೇತುವೆಯಲ್ಲಿ 400 ಕೇಬಲ್‌ಗಳ ಬದಲಾವಣೆ ಕಾಮಗಾರಿ ಮುಕ್ತಾಯವಾಗಿ ಐದು ತಿಂಗಳು ಕಳೆದಿದ್ದರೂ ಭಾರಿ ವಾಹನ ಸಂಚಾರಕ್ಕೆ ಇನ್ನೂ ‘ಹಸಿರು ನಿಶಾನೆ’ ದೊರೆತಿಲ್ಲ. ಇದರಿಂದ ಈ ಮಾರ್ಗದಲ್ಲಿ ವಾಹನ ದಟ್ಟಣೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ಸಿಗುವುದು ವಿಳಂಬವಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ವಾಹನ ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆ. ದಟ್ಟಣೆಯಲ್ಲಿ ಆಂಬುಲೆನ್ಸ್‌ಗಳು ಸಿಲುಕಿ ರೋಗಿಗಳ ಜೀವಕ್ಕೆ ಆಪತ್ತು ಎದುರಾಗುತ್ತಿದೆ. ನಗರದಲ್ಲಿ 15 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಈ ಮಾರ್ಗದ ಹಲವು ಜಂಕ್ಷನ್‌ಗಳಲ್ಲಿ ಎರಡರಿಂದ ಮೂರು ಅಡಿ ನೀರು ಸಂಗ್ರಹಗೊಂಡು ಅಲ್ಲಲ್ಲಿ ವಾಹನಗಳು ಕೆಟ್ಟು ನಿಲ್ಲುತ್ತಿವೆ ಎಂದು ಸಂಚಾರ ಪೊಲೀಸರು ಹೇಳುತ್ತಾರೆ.

ಹಾಸನ, ತುಮಕೂರು, ದಾವಣಗೆರೆ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಸಂಜೆ ವೇಳೆಯಲ್ಲಿ ಸಾವಿರಾರು ವಾಹನಗಳು ನಗರ ಪ್ರವೇಶಿಸುತ್ತವೆ. ಸಂಜೆ ಧಾರಾಕಾರ ಮಳೆ ಆಗುತ್ತಿರುವ ಪರಿಣಾಮ ಸವಾರರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಪರ್ಯಾಯ ಮಾರ್ಗವಿಲ್ಲದೇ ವಾಹನಗಳು ಮೇಲ್ಸೇತುವೆ ಕೆಳ ಮಾರ್ಗದಲ್ಲೇ ಸಂಚರಿಸುತ್ತಿರುವ ಪರಿಣಾಮ ರಸ್ತೆಯಲ್ಲೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳು ಸರಾಗವಾಗಿ ಮುಂದಕ್ಕೆ ಸಾಗಲು ಸಾಧ್ಯವಾಗುತ್ತಿಲ್ಲ. ಕಳೆದ ಎರಡು ದಿನಗಳಿಂದ ವಾಹನ ಸವಾರರ ಸ್ಥಿತಿ ಹೇಳತೀರದಾಗಿದೆ.

ADVERTISEMENT

ಕೆನ್ನಮೆಟಲ್‌ (ವಿಡಿಯಾ) ಬಳಿಯ ಟೋಲ್‌ ಬಳಿ ವಾಹನಗಳು 1ರಿಂದ 2 ಕಿ.ಮೀ ಸಾಲುಗಟ್ಟಿ ನಿಲ್ಲುತ್ತಿವೆ. ಶನಿವಾರ ಸಂಜೆ ಹಾಗೂ ಭಾನುವಾರ ಸಂಜೆ ನೆಲಮಂಗಲದಿಂದ ಯಶವಂತಪುರಕ್ಕೆ ಹಾಗೂ ಯಶವಂತಪುರದಿಂದ ನೆಲಮಂಗಲದ ಕಡೆಗೆ ತೆರಳಲು ವಾಹನ ಸವಾರರಿಗೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು ಎಂದು ಸವಾರರು ಅಳಲು ತೋಡಿಕೊಂಡರು.

‘ಮೇಲ್ಸೇತುವೆಯ ದುರಸ್ತಿ ಕಾರ್ಯ ಮುಕ್ತಾಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಯಾವ ಕಾರಣದಿಂದ ಅನುಮತಿ ನೀಡುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಅನುಮತಿ ನೀಡಿದರೆ ದೊಡ್ಡ ಸಮಸ್ಯೆ ತಪ್ಪಲಿದೆ’ ಎಂದು ಕ್ಯಾಬ್‌ ಚಾಲಕ ಮೋಹನ್‌ ಹೇಳಿದರು.

ಮತ್ತಷ್ಟು ವಿಳಂಬ: ‘ಮೇಲ್ಸೇತುವೆ 4 ಕಿ.ಮೀ ಇದ್ದು 1 ಕಿ.ಮೀನಲ್ಲಿ ಮಾತ್ರ 400 ಕೇಬಲ್‌ ಬದಲಾವಣೆ ಮಾಡಲಾಗಿದೆ. ಈ ಭಾಗದ ಸ್ಪ್ಯಾನ್‌ಗಳಲ್ಲಿ ಮಾತ್ರ ಸಾಮರ್ಥ್ಯ ಹೆಚ್ಚಾಗಿದೆ. ಉಳಿದ ಸ್ಪ್ಯಾನ್‌ಗಳಲ್ಲಿ 1,200 ಕೇಬಲ್‌ ಬದಲಾವಣೆ ಮಾಡಬೇಕು. ಕೇಬಲ್‌ ಬದಲಾವಣೆ ಆದ ಮೇಲೆ ಕಾಂಕ್ರೀಟ್‌ ಭರ್ತಿ ಮಾಡಬೇಕಿದ್ದು ಆಗ ಮೇಲ್ಸೇತುವೆಯಲ್ಲಿ ಯಾವುದೇ ವಾಹನ ಸಂಚಾರ ಇರಬಾರದು. ಮುಂದಿನ ವಾರ ಸಂಚಾರ ಪೊಲೀಸರ ಜತೆ ಚರ್ಚಿಸಿ ಉಳಿದ ಕೇಬಲ್‌ಗಳ ಬದಲಾವಣೆಗೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಜೊತೆಗೆ ಮುಂದಿನ ವಾರ ಸಭೆ ನಡೆಸಿ ಭಾರಿ ವಾಹನ ಸಂಚಾರಕ್ಕೆ ಅನುಮತಿ ನೀಡುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ.
ಜಯಕುಮಾರ್‌ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ದುರಸ್ತಿ ಕಾರ್ಯ ಏನು– ಎತ್ತ?
* ಮೇಲ್ಸೇತುವೆಯ 102 103ನೇ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ 2021ರ ಡಿಸೆಂಬರ್‌ನಲ್ಲಿ ಎಲ್ಲ ಮಾದರಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. * 2022ರಲ್ಲಿ ತಜ್ಞರು ಪರಿಶೀಲಿಸಿ ಭಾರಿ ವಾಹನ ಸಂಚಾರ ನಿರ್ಬಂಧಿಸಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. * ತಜ್ಞರ ಸೂಚನೆಯಂತೆ 2023ರ ಜನವರಿಯಲ್ಲಿ ಕೇಬಲ್‌ಗಳ ಬದಲಾವಣೆ ಕಾಮಗಾರಿ ಆರಂಭಿಸಲಾಗಿತ್ತು. ಡಿಸೆಂಬರ್‌ ವೇಳೆಗೆ 400 ಕೇಬಲ್‌ಗಳ ಬದಲಾವಣೆ ಕೆಲಸ ಪೂರ್ಣಗೊಂಡಿತ್ತು. * ಇದೇ ವರ್ಷದ ಜನವರಿ 16ರಿಂದ ಮೂರು ದಿನ ಮೇಲ್ಸೇತುವೆ ಪರಿಶೀಲನಾ ಕಾರ್ಯ ನಡೆಸಲಾಗಿತ್ತು. ಪರಿಶೀಲನಾ ಕಾರ್ಯದ ವೇಳೆ ಮೇಲ್ಸೇತುವೆಯ ಸಾಮರ್ಥ್ಯ ಹೆಚ್ಚಿರುವುದು ಗೊತ್ತಾಗಿತ್ತು. * ಜನವರಿ 29ರಂದು ಹೆದ್ದಾರಿ ಪ್ರಾಧಿಕಾರಕ್ಕೆ ಪರಿಶೀಲನಾ ವರದಿ ಸಲ್ಲಿಸಿದ್ದ ತಜ್ಞರು.
‘ಹೆದ್ದಾರಿ ಪ್ರಾಧಿಕಾರದವರು ಸಂರ್ಪಕಿಸಿಲ್ಲ’
ಜನವರಿಯಲ್ಲಿ ಸಾಮರ್ಥ್ಯ ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಟ್ಟು ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಿದ್ದೆವು. ಅದಾದ ಮೇಲೆ ಹೆದ್ದಾರಿ ಪ್ರಾಧಿಕಾರದವರು ನಮ್ಮನ್ನು ಸಂಪರ್ಕಿಸಿಲ್ಲ. ಹೆದ್ದಾರಿಯಲ್ಲಿ ನೀರು ಸಂಗ್ರಹಗೊಳ್ಳುತ್ತಿದೆ. ಮೇಲ್ಸೇತುವೆಯಲ್ಲಿ ಬಸ್‌ ಟ್ಯಾಂಕರ್‌ಗಳ ಸಂಚಾರಕ್ಕೆ ಅವಕಾಶ ಲಭಿಸಿದರೆ ತುಮಕೂರು ರಸ್ತೆಯಲ್ಲಿ ವಾಹನ ದಟ್ಟಣೆ ಸ್ವಲ್ಪಮಟ್ಟಿಗೆ ತಗ್ಗಲಿದೆ.– ಎಂ.ಎನ್‌.ಅನುಚೇತ್‌ ಜಂಟಿ ಪೊಲೀಸ್‌ ಕಮಿಷನರ್‌ ಸಂಚಾರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.