ಬೆಂಗಳೂರು: ‘ಸ್ವಾತಂತ್ರ್ಯಾ ನಂತರ ದೇಶ ವಿಭಜನೆಯನ್ನು ವಿರೋಧಿಸಿದ್ದ ಅಂಬೇಡ್ಕರ್, ಪ್ರತ್ಯೇಕ ರಾಷ್ಟ್ರದ ಕೂಗು ಜೋರಾದಾಗ ಧರ್ಮಾಧಾರಿತ ಜನರ ವರ್ಗಾವಣೆಯನ್ನು ಪ್ರಬಲವಾಗಿ ಪ್ರತಿಪಾದಿಸಿದ್ದರು. ಅವರ ಆಶಯ ಅರಿಯದೆ ಗಾಂಧೀಜಿ ಮೊದಲಾದವರು ಅಂದು ವಿರೋಧಿಸಿದ ಪರಿಣಾಮ ಇಂದು ಯುದ್ಧದ ಪರಿಸ್ಥಿತಿ ಎದುರಿಸುತ್ತಿದ್ದೇವೆ’ ಎಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದರು.
ಜಯನಗರ ಸರ್ಕಾರಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಜಂಟಿಯಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಹಾಗೂ ಬಿ.ಆರ್. ಅಂಬೇಡ್ಕರ್ ಅವರ ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯ ಸಂವಾದದಲ್ಲಿ ಭಾಗವಹಿಸಿ, ಮಾತನಾಡಿದರು.
‘ಗಾಂಧೀಜಿ ಬದುಕಿರುವಾಗಲೇ ಭಾರತ–ಪಾಕಿಸ್ತಾನ ವಿಭಜನೆಯಾಯಿತು. ಅಸ್ಪೃಶ್ಯರ ಹಕ್ಕುಗಳನ್ನು ಕಸಿಯಲು ಆಮರಣಾಂತ ಉಪವಾಸ ನಡೆಸಿದ ಗಾಂಧೀಜಿ, ದೇಶ ವಿಭಜನೆ ವಿರೋಧಿಸಿ ಏಕೆ ಆಮರಣಾಂತ ಉಪವಾಸ ನಡೆಸಲಿಲ್ಲ– ಈ ಪ್ರಶ್ನೆಯನ್ನು ಅಂಬೇಡ್ಕರ್ ಅವರೂ ಕೇಳಿದ್ದರು. ಒಂದು ವೇಳೆ ದೇಶ ವಿಭಜನೆ ವಿರೋಧಿಸಿ ಉಪವಾಸ ಕೈಗೊಂಡರೆ ನೆಹರೂ, ಮೊಹಮ್ಮದ್ ಅಲಿ ಜಿನ್ನಾರನ್ನು ಒಪ್ಪಿಸಲು ಸಾಧ್ಯವಿಲ್ಲವೆಂಬ ಅರಿವು ಅವರಿಗಿತ್ತು. ಇದರಿಂದ ದೇಶ ವಿಭಜನೆಗೆ ಬೆಂಬಲಿಸಿ, ಕೋಟ್ಯಂತರ ರೂಪಾಯಿಯನ್ನು ಪಾಕಿಸ್ತಾನಕ್ಕೆ ಕೊಡಿಸಿದರು. ಇದನ್ನು ಅಂಬೇಡ್ಕರ್ ವಿರೋಧಿಸಿದ್ದರು’ ಎಂದರು.
‘ದೇಶ ವಿಭಜನೆಯ ಬಳಿಕ ಗಲಭೆ, ಘರ್ಷಣೆಗಳು ನಡೆಯಬಾರದು ಎಂಬ ಕಾರಣಕ್ಕೆ ಭಾರತದಲ್ಲಿದ್ದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ, ಅಲ್ಲಿದ್ದ ಹಿಂದೂಗಳನ್ನು ಭಾರತಕ್ಕೆ ಸ್ಥಳಾಂತರಿಸುವಂತೆ ಅಂಬೇಡ್ಕರ್ ಹೇಳಿದ್ದರು. ಅವರು ಈ ಬಗ್ಗೆ ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯಲ್ಲಿ ವಿವರಿಸಿದ್ದಾರೆ’ ಎಂದು ಹೇಳಿದರು.
ಲೇಖಕ ಜಿ.ಬಿ. ಹರೀಶ್, ‘ಅಂಬೇಡ್ಕರ್ ಅವರು ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯಲ್ಲಿ ಅಂಕಿಅಂಶದ ಸಹಿತ ವಾಸ್ತವಿಕತೆಯನ್ನು ಅನಾವರಣ ಮಾಡಿದ್ದಾರೆ. ಇಸ್ಲಾಂನಲ್ಲಿರುವ ಜಾತಿ ಪದ್ಧತಿ, ಅಸಮಾನತೆಯಂತಹ ವಿಷಯಗಳನ್ನೂ ಪ್ರಸ್ತಾಪಿಸಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸಲು ರಾಷ್ಟ್ರೀಯ ಮನೋಭಾವ ಹೊಂದಿರಬೇಕೆಂದು ಪ್ರತಿಪಾದಿಸಿದ್ದಾರೆ’ ಎಂದರು.
ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್, ಸಮತಾ ಸೈನಿಕ ದಳದ ಜಿ. ಗೋವಿಂದಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.