ADVERTISEMENT

ಆ್ಯಂಬಿಡೆಂಟ್ ವಂಚನೆ: ಜನಾರ್ದನ ರೆಡ್ಡಿ ಸೇರಿದಂತೆ ಇತರೆ ವಿರುದ್ಧ ಚಾರ್ಜ್‌ಶೀಟ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:34 IST
Last Updated 18 ಫೆಬ್ರುವರಿ 2019, 20:34 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ    

ಬೆಂಗಳೂರು: ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದ್ದ ‘ಆ್ಯಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ’ ಪ್ರಕರಣ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ಮಂಗಳವಾರ ದೋಷಾರೋಪಪಟ್ಟಿ ಸಲ್ಲಿಸಲಿದ್ದಾರೆ.

ದೇವರಜೀವನಹಳ್ಳಿಯಲ್ಲಿ ‘ಆ್ಯಂಬಿಡೆಂಟ್’ ಕಂಪನಿ ತೆರೆದಿದ್ದ ಫರೀದ್ ಎಂಬಾತ, ಅಧಿಕ ಬಡ್ಡಿಯ ಆಮಿಷವೊಡ್ಡಿ 15 ಸಾವಿರಕ್ಕೂ ಹೆಚ್ಚು ಜನರಿಂದ ₹ 600 ಕೋಟಿ ಹಣ ಹೂಡಿಸಿಕೊಂಡು ವಂಚಿಸಿದ್ದ.

ಈ ಪ್ರಕರಣದಲ್ಲಿ ಬಂಧನವಾಗದಂತೆ ನೋಡಿಕೊಳ್ಳುವುದಾಗಿ ನಂಬಿಸಿ ಜನಾರ್ದನರೆಡ್ಡಿ, ಫರೀದ್‌ನಿಂದ ₹ 20 ಕೋಟಿ ಪಡೆದಿದ್ದರು ಎನ್ನಲಾಗಿತ್ತು. ತನಿಖೆ ಚುರುಕುಗೊಳಿಸಿದ್ದ ಸಿಸಿಬಿ ಪೊಲೀಸರು, ರೆಡ್ಡಿ ಜತೆಗೆ ಅವರ ಆಪ್ತ ಸಹಾಯಕ ಆಲಿಖಾನ್ ಅವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು.

ADVERTISEMENT

‘ತನಿಖೆ ಪೂರ್ಣಗೊಂಡಿದ್ದು 4 ಸಾವಿರಕ್ಕೂ ಹೆಚ್ಚು ಪುಟುಗಳ ಆರೋಪಪಟ್ಟಿ ಸಿದ್ಧವಾಗಿದೆ. ತಾಜ್‌ ವೆಸ್ಟೆಂಡ್ ಹೋಟೆಲ್‌ನಲ್ಲಿ ಡೀಲ್ ಮಾತುಕತೆ ನಡೆದಿದ್ದರಿಂದ ಹೋಟೆಲ್‌ ನೌಕರರ ಹೇಳಿಕೆ, ರೆಡ್ಡಿ ಮನೆಗೆಲಸದವರ ಹೇಳಿಕೆ, ಫರೀದ್‌ನಿಂದ ಹಣ ಪಡೆದಿದ್ದ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳ ಹೇಳಿಕೆಗಳನ್ನೂ ಅದರಲ್ಲಿ ಸೇರಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.