ADVERTISEMENT

ಬೆಂಗಳೂರು | ಅಮೆರಿಕದ ದಂಪತಿ ನೆಲಸಿದ್ದ ವಿಲ್ಲಾದಲ್ಲಿ ಕಳ್ಳತನ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 15:54 IST
Last Updated 28 ಜನವರಿ 2026, 15:54 IST
ಚಂದನ್ ರೌಲ್
ಚಂದನ್ ರೌಲ್   

ಬೆಂಗಳೂರು: ಅಮೆರಿಕದ ಮೆರಿಯಲ್ ಮೊರೆನೊ ಅವರು ನಗರದಲ್ಲಿ ನೆಲಸಿದ್ದ ವಿಲ್ಲಾದಲ್ಲಿ ಚಿನ್ನ, ವಜ್ರದ ಆಭರಣ ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಜೀವನ್‌ಭಿಮಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಚಂದನ್ ರೌಲ್ ಬಂಧಿತ ಆರೋಪಿ.

ಆರೋಪಿಯಿಂದ ₹1 ಕೋಟಿ ಮೌಲ್ಯದ 176 ಗ್ರಾಂ ಚಿನ್ನ ಹಾಗೂ ವಜ್ರದ ಆಭರಣ, ₹39 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಅಮೆರಿಕದ ಟೆಕ್ಸಾಸ್‌ನ ಮೆರಿಯಲ್ ಮೊರೆನೊ ಅವರು ನಗರದ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೋಡಿಹಳ್ಳಿಯ ರುಸ್ತುಂಭಾಗ್‌ ಮುಖ್ಯರಸ್ತೆಯಲ್ಲಿರುವ ವಿಲ್ಲಾದಲ್ಲಿ ನೆಲಸಿದ್ದರು. ಜ.21ರಂದು ಅವರು ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ವಿಲ್ಲಾಕ್ಕೆ ವಾಪಸ್ ಬಂದು ನೋಡಿದಾಗ ಕೊಠಡಿಯಲ್ಲಿದ್ದ ಲಾಕರ್‌ನಲ್ಲಿ ಇಡಲಾಗಿದ್ದ ಚಿನ್ನ ಹಾಗೂ ವಜ್ರದ ಆಭರಣಗಳು ಕಳ್ಳತನ ಆಗಿರುವುದು ಗೊತ್ತಾಗಿತ್ತು ಎಂದು ಮೂಲಗಳು ಹೇಳಿವೆ.

ಮೆರಿಯಲ್​ ಮೊರೆನೊ ಅವರ ವಿಲ್ಲಾದಲ್ಲಿ ಚಂದನ್ ರೌಲ್ ಕೆಲಸ ಮಾಡುತ್ತಿದ್ದ. ಮೆರಿಯಲ್​ ಕೆಲಸಕ್ಕೆ ಹೋಗಿದ್ದಾಗ ಆರೋಪಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

ವಿಲ್ಲಾದಲ್ಲಿ ಕಳ್ಳತನ ನಡೆದಿರುವ ಮಾಹಿತಿಯನ್ನು ಮೆರಿಯಲ್​ ಅವರು ಅಮೆರಿಕಕ್ಕೆ ತೆರಳಿದ್ದ ಪತಿಗೆ ಕರೆ ಮಾಡಿ ತಿಳಿಸಿದ್ದರು. ಅವರು ತಕ್ಷಣವೇ ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಲ್ಲಿನ ಅಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ದೂರು ನೀಡಿದ್ದರು. ಮೆರಿಯಲ್ ಅವರಿಂದ ದೂರು ಪಡೆದ ಜೀವನ್ ಭಿಮಾನಗರ ಠಾಣೆ ಪೊಲೀಸರು, ಚಂದನ್ ರೌಲ್‌ ಪತ್ತೆ ಮಾಡಿ ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಯುಎಸ್​​ ಡಾಲರ್‌ಗಳನ್ನು ಭಾರತೀಯ ಕರೆನ್ಸಿಗೆ ಬದಲಾವಣೆ ಮಾಡಿಕೊಂಡು ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಲು ಆರೋಪಿ ಯತ್ನಿಸಿದ್ದ. ಅಷ್ಟರಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಧನ್ಯವಾದ ತಿಳಿಸಿರುವುದಾಗಿ ಮೆರಿಯಲ್ ಮೊರೆನೊ ಹೇಳಿದರು.

ಆರೋಪಿಯಿಂದ ಜಪ್ತಿ ಮಾಡಿಕೊಂಡ ಚಿನ್ನದ ಆಭರಣ 

₹18 ಕೋಟಿ ಮೌಲ್ಯದ ಆಭರಣ ಕಳ್ಳತನ: ಹೊರ ರಾಜ್ಯಕ್ಕೆ ತಂಡ

ಬೆಂಗಳೂರು: ಬಿಲ್ಡರ್ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು ಆರೋಪಿಗಳ ಪತ್ತೆಗೆ ಆ ತಂಡಗಳು ಹೊರರಾಜ್ಯಕ್ಕೆ ತೆರಳಿವೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ‍

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು. ಮಾರತ್‌ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರ ರಸ್ತೆಯ ಯಮಲೂರಿನ ನಿವಾಸಿ ಬಿಲ್ಡರ್‌ ಎಂ.ಆರ್. ಶಿವಕುಮಾರ್ ಅವರ ಮನೆಯಲ್ಲಿ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು.

ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳದ ದಿನೇಶ್‌ (32) ಹಾಗೂ ಕಮಲಾ (25) ಅವರ ವಿರುದ್ಧ ಎಂ.ಆರ್.ಶಿವಕುಮಾರ್ ಅವರ ಪುತ್ರ ಶಿಮಾಂತ್‌ ಎಸ್‌. ಅರ್ಜುನ್‌ ಅವರು ದೂರು ನೀಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ₹17.73 ಕೋಟಿಯ 11.5 ಕೆ.ಜಿ ಚಿನ್ನ ಹಾಗೂ ವಜ್ರದ ಆಭರಣ ₹14.60 ಲಕ್ಷ ಮೌಲ್ಯದ 5 ಕೆ.ಜಿ ಬೆಳ್ಳಿಯ ಸಾಮಗ್ರಿ ₹11.50 ಲಕ್ಷ ನಗದು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಿನೇಶ್ ಹಾಗೂ ಕಮಲಾ ಅವರನ್ನು ಮನೆಯ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಅವರೇ ಕೃತ್ಯ ಎಸಗಿ ಪರಾರಿ ಆಗಿದ್ದಾರೆ. ಮನೆಯ ಮೊದಲ ಮಹಡಿಯ ಬೆಡ್ ರೂಂನಲ್ಲಿದ್ದ ಲಾಕರ್ ಅನ್ನು ಸಲಾಕೆಯಿಂದ ಮೀಟಿ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದಿನೇಶ್‌ ಹಾಗೂ ಕಮಲಾ ಅವರು 20 ದಿನಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.