ADVERTISEMENT

ಅನಧಿಕೃತ ಧಾರ್ಮಿಕ ಕಟ್ಟಡ ತೆರವು: ಅಮಿಕಸ್‌ ಕ್ಯೂರಿ ನೇಮಕ

ವಿಕ್ರಂ ಹುಯಿಲಗೋಳಗೆ ಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 19:02 IST
Last Updated 1 ಫೆಬ್ರುವರಿ 2023, 19:02 IST

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಅರ್ಜಿಯ ಪ್ರಕರಣದಲ್ಲಿ, ಹೈಕೋರ್ಟ್‌ನ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರನ್ನು ಅಮಿಕಸ್‌ ಕ್ಯೂರಿ (ಕೋರ್ಟ್‌ಗೆ ಸಹಕರಿಸುವ ವಕೀಲ) ಆಗಿ ನೇಮಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನ ಜಾರಿಗೆ ಹೈಕೋರ್ಟ್ ದಾಖಲಿಸಿಕೊಂಡಿರುವ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾ. ಅಶೋಕ್‌ ಎಸ್‌.ಕಿಣಗಿ ಅವರಿದ್ದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

‘ಪ್ರಕರಣದಲ್ಲಿ ಸಾಕಷ್ಟು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿದಾರರ ಆಕ್ಷೇಪಣೆಗಳನ್ನು ಕೂಲಂಕಷ ಪರಿಶೀಲಿಸಬೇಕಿದೆ. ಸರ್ಕಾರ ಗುರುತಿಸಿರುವ ಅನಧಿಕೃತ ಕಟ್ಟಡಗಳ ಪಟ್ಟಿಯಲ್ಲಿ ಕೈಬಿಡಲಾಗಿರುವ ಕೇಂದ್ರಗಳನ್ನು ಗುರುತಿಸಿ 3 ವಾರಗಳಲ್ಲಿ ಹೊಸಪಟ್ಟಿ ಒದಗಿಸಬೇಕು’ ಎಂದು ಅಮಿಕಸ್‌ ಕ್ಯೂರಿ ಅವರಿಗೆ ಸೂಚಿಸಿರುವ ಪೀಠ, ‘ಸರ್ಕಾರವು ಅಮಿಕಸ್‌ ಕ್ಯೂರಿಗೆ ಸಂಪೂರ್ಣ ದಾಖಲೆಗಳನ್ನು ಒದಗಿಸಿ ನೆರವು ನೀಡಬೇಕು’ ಎಂದು ನಿರ್ದೇಶಿಸಿದೆ. ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ.

ADVERTISEMENT

‘ಈತನಕ 1,563 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. 457 ಕಟ್ಟಡಗಳನ್ನು ಉಳಿಸಿಕೊಳ್ಳಲಾಗಿದ್ದು 48 ಅನ್ನು ಸ್ಥಳಾಂತರಿಸಲಾಗಿದೆ ಮತ್ತು 17 ಕಟ್ಟಡಗಳನ್ನು ಸಕ್ರಮಗೊಳಿಸಲಾಗಿದೆ’ ಎಂದು ಸರ್ಕಾರ ನ್ಯಾಯಪೀಠಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

‘ಸುಪ್ರೀಂ ಕೋರ್ಟ್‌ 2009ರ ಸೆಪ್ಟೆಂಬರ್‌ 29ರಂದು ನೀಡಿರುವ ತೀರ್ಪಿನಂತೆ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತಂತೆ ವರದಿ ಸಲ್ಲಿಸಿ‘ ಎಂದು ಹೈಕೋರ್ಟ್‌ 2019ರ ಸೆಪ್ಟೆಂಬರ್‌ 5ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ರಾಜ್ಯ ಸರ್ಕಾರ ಕಾಲಕಾಲಕ್ಕೆ ಹೈಕೋರ್ಟ್‌ಗೆ ವರದಿ ಸಲ್ಲಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.