ಬೆಂಗಳೂರು: ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಆರಂಭಿಸುವ ಮುನ್ನ ರಾಜ್ಯದಲ್ಲಿನ ಸಹಕಾರ ಕ್ಷೇತ್ರದ ಕುರಿತು ಹಿಂದಿನ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಲ್ಲಿಸಿದ್ದ ವರದಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನೂತನ ಸಹಕಾರ ಸಚಿವಾಲಯ ಸ್ಥಾಪನೆಗೆ ಸಿದ್ಧತೆ ನಡೆದಿರುವಾಗಲೇ ಸಹಕಾರ ಕ್ಷೇತ್ರದ ಕಾರ್ಯನಿರ್ವಹಣೆ, ಅಭಿವೃದ್ಧಿ ಮತ್ತು ಅನುಕೂಲಗಳ ಕುರಿತು ಸೋಮಶೇಖರ್ ವಿಸ್ತೃತ ವರದಿ ಸಲ್ಲಿಸಿದ್ದರು. ವರದಿಯನ್ನು ಪರಿಶೀಲಿಸಿದ ಬಳಿಕ ಪತ್ರ ಬರೆದಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಮೆಚ್ಚುಗೆ ಸೂಚಿಸಿದ್ದಾರೆ.
‘ನಿಮ್ಮ ವರದಿಯನ್ನು ನಾನು ಓದಿದ್ದೇನೆ. ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಉಲ್ಲೇಖಿಸಿರುವ ವಿಚಾರಗಳ ಕುರಿತು ತಿಳಿದು ಸಂತೋಷವಾಯಿತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಯಲ್ಲೂ ಚರ್ಚಿಸಿರುವೆ’ ಎಂದು ಅಮಿತ್ ಶಾ ಪತ್ರದಲ್ಲಿ ತಿಳಿಸಿದ್ದಾರೆ.
‘ಸಹಕಾರದ ಮೂಲಕ ಅಭಿವೃದ್ಧಿಯ ಪರ್ವ ಕಾಣುವಂತಾಗಬೇಕು ಎಂಬ ನಿಮ್ಮ ಆಶಯವನ್ನು ನಾನೂ ಬೆಂಬಲಿಸುತ್ತೇನೆ. ಅದಕ್ಕೆ ಪೂರಕವಾಗಿ ನೂತನ ಸಹಕಾರ ಸಚಿವಾಲಯ ಕೆಲಸ ಮಾಡಲಿದೆ’ ಎಂದು ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.