ADVERTISEMENT

ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಆದೇಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 1:46 IST
Last Updated 27 ಆಗಸ್ಟ್ 2021, 1:46 IST

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಸ್ವಯಂ ಸೇವಕರನ್ನು ಬಳಸಿಕೊಂಡು ರಾಜ್ಯದ 750 ಗ್ರಾಮಗಳಲ್ಲಿ ‘ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ ಅನುಷ್ಠಾನಕ್ಕೆ ಆದೇಶ ಹೊರಡಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆ ಸಂದೇಶದಲ್ಲಿ ಈ ಯೋಜನೆಯನ್ನು ಪ್ರಕಟಿಸಿದ್ದರು. 750 ಗ್ರಾಮಗಳನ್ನು ಗುರುತಿಸಿ, ಅಲ್ಲಿ ಬಡತನ ನಿರ್ಮೂಲನೆ ಮತ್ತು ಜೀವನಮಟ್ಟ ಸುಧಾರಣೆಗೆ ಪೂರಕವಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆಗಸ್ಟ್‌ 24ರಂದು ಆದೇಶ ಹೊರಡಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ನೀತಿ ಆಯೋಗದ ಅಂಕಿಅಂಶಗಳ ಪ್ರಕಾರ, ರಾಜ್ಯದ 30 ಲಕ್ಷ (ಶೇಕಡ 17.3) ಕುಟುಂಬಗಳು ಬಹು ಆಯಾಮದ ಬಡತನ ರೇಖೆಗಿಂತ ಕೆಳಗಿವೆ. 750 ಹಳ್ಳಿಗಳಲ್ಲಿ 1.27 ಲಕ್ಷ ಕುಟುಂಬಗಳು ಅತಿಯಾದ ಬಡತನ ಹೊಂದಿವೆ. ಈ ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲೆ ತರಲು ‘ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಅತಿಯಾದ ಬಡತನದ ಕುಟುಂಬಗಳಿಗೆ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಲು ಎನ್‌ಎಸ್‌ಎಸ್‌ ಘಟಕಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.