ADVERTISEMENT

ವೃತ್ತ ಆನಂದ; ಮಳೆ ಬಂದರೆ ಗೋವಿಂದ!

ಶರತ್‌ ಹೆಗ್ಡೆ
Published 1 ಸೆಪ್ಟೆಂಬರ್ 2018, 19:44 IST
Last Updated 1 ಸೆಪ್ಟೆಂಬರ್ 2018, 19:44 IST
ಆನಂದರಾವ್‌ ಸರ್ಕಲ್‌ ಬಳಿ ಗಾಂಧಿ ನಗರದ ಮುಖ್ಯ ರಸ್ತೆಯಲ್ಲಿ ನಡೆದಿರುವ ಮೋರಿಯ ಅರೆಬರೆ ಕಾಮಗಾರಿ–ಪ್ರಜಾವಾಣಿ ಚಿತ್ರಗಳು: ಚಂದ್ರಹಾಸ ಕೋಟೆಕಾರ್‌
ಆನಂದರಾವ್‌ ಸರ್ಕಲ್‌ ಬಳಿ ಗಾಂಧಿ ನಗರದ ಮುಖ್ಯ ರಸ್ತೆಯಲ್ಲಿ ನಡೆದಿರುವ ಮೋರಿಯ ಅರೆಬರೆ ಕಾಮಗಾರಿ–ಪ್ರಜಾವಾಣಿ ಚಿತ್ರಗಳು: ಚಂದ್ರಹಾಸ ಕೋಟೆಕಾರ್‌   

ಬೆಂಗಳೂರು: ಈ ವೃತ್ತದ ಹೆಸರು ಆನಂದರಾವ್‌ ಎಂದು. ಮಳೆ ಬಂದರೆ ಮಾತ್ರ ಗೋವಿಂದ... ಹೀಗೆಂದು ಆನಂದರಾವ್‌ ವೃತ್ತ – ಗಾಂಧಿ ನಗರದ ಮಧ್ಯೆ ಓಡಾಡುತ್ತಿದ್ದ ರಿಕ್ಷಾ ಚಾಲಕರು ಈ ಪ್ರದೇಶವನ್ನು ಬಣ್ಣಿಸಿದರು.

‘ಸೆಪ್ಟೆಂಬರ್‌ನಲ್ಲಿ ಭಾರೀ ಮಳೆ ಬರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದಾಗಲೇ ನೋಡಿ, ಇಲ್ಲಿನ ಎಲ್ಲ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಚರಂಡಿಗಳಲ್ಲಿ ಮಣ್ಣು, ಕೆಸರು ತುಂಬಿದ್ದು ಹಾಗೇ ಇದೆ. ಒಂದಿಷ್ಟು ಮರಳಿನ ಚೀಲ ಹಾಕಿ ಚರಂಡಿ ನೀರು ತಡೆಗಟ್ಟುವುದು, ಪೈಪ್‌ಗಳನ್ನು ರಾಶಿ ಹಾಕಿ ಹೋದರೆ ಕಾರ್ಮಿಕರಾಗಲಿ ಬಿಬಿಎಂಪಿ ಸಿಬ್ಬಂದಿಯಾಗಲಿ ಮತ್ತೆ ಇತ್ತ ತಿರುಗಿ ನೋಡುವುದಿಲ್ಲ’ ಎಂದು ರಿಕ್ಷಾ ಚಾಲಕರು, ವ್ಯಾಪಾರಿಗಳು ಅಸಹನೆ ವ್ಯಕ್ತಪಡಿಸಿದರು.

‘ಈಗ ಹೋಟೆಲ್‌ ಮುಂಭಾಗದ ರಸ್ತೆಯನ್ನೇ ಅಗೆದುಹಾಕಿದ್ದಾರೆ. ನೀರು ಹರಿಯಲು ಸಿಮೆಂಟ್‌ ಪೈಪ್‌ಗಳನ್ನು ಹಾಕಿ ಹೋಗಿದ್ದಾರೆ. ವಾಹನ ಪಾರ್ಕಿಂಗ್‌ ಮಾಡುವಂತಿಲ್ಲ. ಗ್ರಾಹಕರು ಬರುವ ದಾರಿಯೂ ಸರಿಯಾಗಿಲ್ಲ. ಹೀಗಿರುವಾಗ ಯಾರು ಬರುತ್ತಾರೆ ಹೇಳಿ’ ಎಂದು ಗಾಂಧಿನಗರ ರೇಸ್‌ಕೋರ್ಸ್‌ ರಸ್ತೆಯ ವಸತಿಗೃಹವೊಂದರ ವ್ಯವಸ್ಥಾಪಕ ರಮೇಶ್‌ ಹೇಳಿದರು.

ADVERTISEMENT

ಇದೇ ದಾರಿಯಲ್ಲಿ ಬೈಕ್‌ ಸವಾರ ವಾಹನ ಸಮೇತ ಚರಂಡಿಯೊಳಗೆ ಸಿಲುಕಿದ್ದು, ಕಾಲುಜಾರಿ ಬಿದ್ದವರ ಕತೆ ಒಂದೊಂದಾಗಿ ಹೊರಬಂದವು.

ಗಾಂಧಿನಗರದ 6ನೇ ಮುಖ್ಯರಸ್ತೆಯಲ್ಲಿ ಕಚೇರಿ ತೆರೆದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಗಾಂಧಿನಗರ ಘಟಕದ ಅಧ್ಯಕ್ಷ ಪಟೇಲ್‌ ಸ್ವಾಮಿಗೌಡ ಹೇಳಿದ್ದು ಹೀಗೆ, ‘ಹಳೇ ಸೆಂಟ್ರಲ್‌ ಜೈಲು, ವೈ.ರಾಮಚಂದ್ರ ರಸ್ತೆ, ತ್ರಿಭುವನ್‌ ಥಿಯೇಟರ್‌ವರೆಗೆ ಬಹುತೇಕ ಮಳಿಗೆಗಳು ರಾಜಕಾಲುವೆಯ ಮೇಲೆಯೇ ಇವೆ. ಇವುಗಳನ್ನು ಪಾಲಿಕೆ ತೆರವು ಮಾಡಲು ಮುಂದಾದಾಗ ಹಲವರು ಕೋರ್ಟ್ ಮೆಟ್ಟಿಲೇರಿದರು. ಪ್ರಕರಣ ಇನ್ನೂ ನಡೆಯುತ್ತಲೇ ಇದೆ’ ಎಂದು ರಾಜಕಾಲುವೆಯ ಹರಿವಿಗಿರುವ ಅಡೆತಡೆಯನ್ನು ವಿವರಿಸಿದರು.

ಮುಂದೆ ವಿಜಯ ಕೆಫೆ ಮುಂಭಾಗದ ರಸ್ತೆ– ಗುಬ್ಬಿ ವೀರಣ್ಣ ರಂಗಮಂದಿರ ಸಂಪರ್ಕಿಸುವ ರಸ್ತೆಯ ಜಂಕ್ಷನ್‌ ಸ್ಥಳ ‘ನೀರಿನ ಜಂಕ್ಷನ್‌’ ಎಂದೇ ಕುಖ್ಯಾತಿ ಪಡೆದಿದೆ. ಸಾಧಾರಣ ಮಳೆ ಬಂದರೂ ಇಲ್ಲಿ ಸೊಂಟಮಟ್ಟ ನೀರು ನಿಲ್ಲುತ್ತದೆ ಎಂದರು ವ್ಯಾಪಾರಿಗಳು.

‘ಅಕ್ಕಪಕ್ಕದ ಅಂಗಡಿಗಳ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಒಮ್ಮೆ ನಾವೆಲ್ಲರೂ ಸಮಸ್ಯೆ ಬಗೆಹರಿಸುವಂತೆ ಕೇಳಿದಾಗ ಆ ಕ್ಷಣಕ್ಕೆ ಪಾಲಿಕೆ ಅಧಿಕಾರಿಗಳು ಏನಾದರೂ ಭರವಸೆ ಕೊಟ್ಟು ಸುಮ್ಮನಾಗುತ್ತಾರೆ. ಮಳೆ ನಿಂತು ಹೋದ ಮೇಲೆ ಘಟನೆಯೂ ಮರೆಯುತ್ತದೆ. ಒಟ್ಟಿನಲ್ಲಿ ಅಸಹಾಯಕರಾಗಿದ್ದೇವೆ’ ಎಂದುಬ್ಯಾಗ್‌ ಅಂಗಡಿ ಮಾಲೀಕ ವಿ.ಎ.ಮಣಿ ಬೇಸರ ವ್ಯಕ್ತಪಡಿಸಿದರು.

ನೆಲಕಚ್ಚಿದ ವ್ಯಾಪಾರ

ಮೊದಲ ಮಳೆಯಿಂದ ಹಿಡಿದು ತೀರಾ ಇತ್ತೀಚಿನವರೆಗೆ ಸುಮಾರು ಎರಡೂವರೆ ತಿಂಗಳಿನಿಂದ ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ. ಕಾರಣ ಸರಳ. ಮಳೆ ಬಂದು ಸೆಲ್ಲರ್‌ನಲ್ಲಿ ನೀರು ತುಂಬಿತು. ಟ್ರಾನ್ಸ್‌ಫಾರ್ಮರ್‌, ವಿದ್ಯುತ್‌ ಪೂರೈಕೆ ಪರಿಕರಗಳು ಕೆಟ್ಟುಹೋದವು. ನೀರು ಹೊರಹಾಕಿ ವ್ಯವಸ್ಥೆ ಸರಿಪಡಿಸುವಲ್ಲಿ ಐದು ದಿನ ಕಳೆದವು.

- ರಮೇಶ್‌, ವಸತಿಗೃಹದ ವ್ಯವಸ್ಥಾಪಕ ರೇಸ್‌ಕೋರ್ಸ್‌ ರಸ್ತೆ

***

ಉಡಾಫೆ ಉತ್ತರಕ್ಕೆ ಏನೆನ್ನಲಿ?

ಗಾಂಧಿನಗರದ 7, 8 ಮತ್ತು 9ನೇ ಕ್ರಾಸ್‌ನ ಎಲ್ಲ ರಸ್ತೆಗಳನ್ನು ಅಗೆದುಹಾಕಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳನ್ನು ಕೇಳಿದರೆ ನೀವೇನು ನಮಗೆ ಮತ ಹಾಕಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಹಾಗೆ ನೋಡಿದರೆ ಇದೆಲ್ಲಾ ಉದ್ಯಮಿಗಳಿರುವ ಪ್ರದೇಶ. ಎಲ್ಲೆಲ್ಲಿಂದಲೋ ಬಂದವರು ಬದುಕು ಕಟ್ಟಿಕೊಂಡಿದ್ದಾರೆ. ತೆರಿಗೆ ಕಟ್ಟುತ್ತಿದ್ದಾರೆ. ಅಂಥವರನ್ನು ಹೀಗೆ ಕೇಳಿದರೆ ಅರ್ಥವಿದೆಯೇ?

– ಪಟೇಲ್‌ ಸ್ವಾಮಿಗೌಡ

***

20 ವರ್ಷಗಳ ಗೋಳು

20 ವರ್ಷಗಳಿಂದ ನಮ್ಮ ಗೋಳು ಹೇಳತೀರದು. ಈ ಪ್ರದೇಶದಲ್ಲಿ ಜಾರಿಬಿದ್ದವರೆಷ್ಟೋ ಜನ, ಮೊಬೈಲ್‌ ಸಹಿತ ಹಲವು ಅಮೂಲ್ಯ ವಸ್ತುಗಳನ್ನು ನೀರಿನ ಮಧ್ಯೆ ಕಳೆದುಕೊಂಡವರು ಲೆಕ್ಕಕ್ಕಿಲ್ಲ. ನಮ್ಮ ಅಂಗಡಿಯಲ್ಲಿ ತೋಯ್ದು ತೊಪ್ಪೆಯಾಗಿ ಮಾರಾಟ ಮಾಡಲಾಗದ ಸರಕುಗಳೇ ರಾಶಿ ಬಿದ್ದಿವೆ ನೋಡಿ.

–ಎ.ವಿ.ಮಣಿ, ಬ್ಯಾಗ್‌ ಅಂಗಡಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.