ADVERTISEMENT

ಸರ್ಕಾರ ಮೌನಿಗಳ ಮನದಾಳ ಅರಿಯಲಿ: ಡಾ.ಆಶಿಶ್‌ ನಂದಿ ಕಿವಿಮಾತು

ಯು.ಆರ್‌.ಅನಂತಮೂರ್ತಿ ಸ್ಮರಣಾರ್ಥ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 20:15 IST
Last Updated 8 ಡಿಸೆಂಬರ್ 2018, 20:15 IST
ಡಾ.ಆಶಿಶ್‌ ನಂದಿ (ಎಡದಿಂದ), ಯು.ಆರ್‌.ಅನಂತಮೂರ್ತಿ ಅವರ ಪತ್ನಿ ಎಸ್ತರ್‌, ಪ್ರಾಧ್ಯಾಪಕ ಡಾ.ಶರತ್‌ ಅನಂತಮೂರ್ತಿ ಹಾಗೂ ಜೈನ್ ವಿಶ್ವವಿದ್ಯಾಲಯದ ಸಹಕುಲಪತಿ ಸಂದೀಪ್‌ ಶಾಸ್ತ್ರಿ ಅವರು ಮೊದಲ ವರ್ಷದ ಉಪನ್ಯಾಸದ ಸಂಚಿಕೆಯನ್ನು ಬಿಡುಗಡೆ ಮಾಡಿದರುಪ್ರಜಾವಾಣಿ ಚಿತ್ರ
ಡಾ.ಆಶಿಶ್‌ ನಂದಿ (ಎಡದಿಂದ), ಯು.ಆರ್‌.ಅನಂತಮೂರ್ತಿ ಅವರ ಪತ್ನಿ ಎಸ್ತರ್‌, ಪ್ರಾಧ್ಯಾಪಕ ಡಾ.ಶರತ್‌ ಅನಂತಮೂರ್ತಿ ಹಾಗೂ ಜೈನ್ ವಿಶ್ವವಿದ್ಯಾಲಯದ ಸಹಕುಲಪತಿ ಸಂದೀಪ್‌ ಶಾಸ್ತ್ರಿ ಅವರು ಮೊದಲ ವರ್ಷದ ಉಪನ್ಯಾಸದ ಸಂಚಿಕೆಯನ್ನು ಬಿಡುಗಡೆ ಮಾಡಿದರುಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರೈತರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರಂತಹ ಮೌನಿಗಳ ಮನದಾಳವನ್ನು ಅರಿತು ಸರ್ಕಾರಗಳು ಆಡಳಿತ ನಡೆಸಬೇಕು’ ಎಂದು ಚಿಂತಕ ಡಾ.ಆಶಿಶ್‌ ನಂದಿ ಸಲಹೆ ನೀಡಿದರು.

‘ಈಗಿನ ವ್ಯವಸ್ಥೆಯಲ್ಲಿ ಧ್ವನಿಯಿಲ್ಲದ ಈ ಸಮುದಾಯಗಳತ್ತ ಮಾಧ್ಯಮಗಳು ಸಹ ಬೆಳಕು ಚೆಲ್ಲುತ್ತಿಲ್ಲ. ಇವರ ನೋವು–ನಲಿವುಗಳಿಗೆ ಪ್ರತಿಬಿಂಬವಾಗುವ ಅವಕಾಶ ಕಲಾವಿದರು, ಲೇಖಕರು ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ಇರುವಂತಹ ವಾತಾವರಣ ನಿರ್ಮಾಣಗೊಳ್ಳಬೇಕು’ ಎಂದು ಬಯಸಿದರು.

ಯು.ಆರ್‌.ಅನಂತಮೂರ್ತಿ ಅವರ ಸ್ಮರಣಾರ್ಥ ಜೈನ್‌ ಡೀಮ್ಡ್‌–ಟು–ಬಿ ಯುನಿವರ್ಸಿಟಿ ಮತ್ತು ಋಜುವಾತು ಟ್ರಸ್ಟ್‌ ಶನಿವಾರ ಆಯೋಜಿಸಿದ್ದ 2ನೇ ವರ್ಷದ ಉಪನ್ಯಾಸದಲ್ಲಿ ‘ವಿಮೋಚನೆಯ ಪರಿಭಾಷೆ ಅರಿಯದವರ ವಿಮೋಚನೆ’ ವಿಷಯದ ಕುರಿತು ಅವರು ವಿಚಾರಗಳನ್ನು ಹಂಚಿಕೊಂಡರು.

ADVERTISEMENT

‘ದೇಶದಲ್ಲಿ15 ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಮುದಾಯ, ಕಷ್ಟಗಳು ಎದುರಾದಾಗ ಹಿಂಸಾಚಾರಕ್ಕೆ ಇಳಿಯಲಿಲ್ಲ. ಆದರೆ, ನಮ್ಮ ಜನಾಕರ್ಷಕ ನಾಯಕರು ಅವರ ಸಮಸ್ಯೆಗಳನ್ನು ಮುಂದಿನ ಸರ್ಕಾರಗಳಿಗೆ ವರ್ಗಾಯಿಸಿದರು’ ಎಂದರು.

‘ಅಣೆಕಟ್ಟು ನಿರ್ಮಾಣದಂತಹ ಬೃಹತ್‌ ಯೋಜನೆಗಳಿಗಾಗಿ ಸ್ವಾತಂತ್ರ್ಯೋತ್ತರದಲ್ಲಿ 6 ಕೋಟಿಗೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಅವರಿಗೆ ಸೂಕ್ತ ಸೌಲಭ್ಯಗಳು ಸಿಕ್ಕಿಲ್ಲ. ಅವರಲ್ಲಿ ಹೆಚ್ಚಿನವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು’ ಎಂದು ಹೇಳಿದರು.

‘ಮೂಲೆಗುಂಪಾದ ಸಮುದಾಯಗಳ ಯುವಜನರೇ ನಕ್ಸಲರಾಗಿದ್ದಾರೆ. ಕೆಲವರು ಸಂಧಾನಕಾರರಾಗುವ ದೃಷ್ಟಿಯಲ್ಲಿ ಅವರೊಂದಿಗೆ ಬೆರೆಯಲು ಇಷ್ಟಪಟ್ಟರೆ ಅದಕ್ಕೆ ಅವಕಾಶ ಇರಬೇಕು’ ಎಂದು ವಾದಿಸಿದರು.

‘ದೇಶದ ಪ್ರಜಾಪ್ರಭುತ್ವ ಇಂದು ಚುನಾವಣಾ ಕೇಂದ್ರಿತವಾಗಿದೆ. ಇಂದು ಆಯ್ಕೆಯಾಗುವ ನಾಯಕ ಮುಂದಿನ ಚುನಾವಣೆಯ ಯೋಚನೆ ಮಾಡುತ್ತಿದ್ದಾನೆ. ಹಾಗಾಗಿ ನಮ್ಮ ನಾಯಕ ಮೋದಿ ಅವರು ದಿನಕ್ಕೆ ನಾಲ್ಕಾರು ಸೂಟು ಬದಲಾಯಿಸುತ್ತ, ಚುನಾವಣಾ ರ‍್ಯಾಲಿಗಳಿಗೆ ಭಾಷಣಗಳನ್ನು ಸಿದ್ಧಪಡಿಸಿಕೊಳ್ಳುತ್ತ, ಮಾಧ್ಯಮಗಳ ಕ್ಯಾಮೆರಾಗಳಿಗೆ ಪೋಸು ನೀಡುತ್ತಲೇ ನಾಲ್ಕೂವರೆ ವರ್ಷಗಳನ್ನು ಕಳೆದರು. ಉತ್ತಮ ಆಡಳಿತ ನೀಡಲುಅವರಿಗೆ ಸಮಯವೇ ಇರಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ಈ ಹಿಂದೆ ಇದ್ದ ಕಾರ್ಯಕರ್ತರ ಸಂಘಟನಾ ಶ್ರಮದ ಬದಲಾಗಿ, ಸದ್ಯ ಜನಾಕರ್ಷಕ ನಾಯಕನಿಂದ ಮತಗಳನ್ನು ಕಲೆಹಾಕುವ ರಾಜಕೀಯ ನಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದಲ್ಲಿರುವುದು ನೈಜ ಪ್ರಜಾಪ್ರಭುತ್ವ ಎಂದು ಅನಂತಮೂರ್ತಿ ನಂಬಿರಲಿಲ್ಲ. ಅವರ ಭಾರತೀಪುರ ಮತ್ತು ಅವಸ್ಥೆ ಕಾದಂಬರಿಗಳಲ್ಲಿ ವ್ಯವಸ್ಥೆಯನ್ನು ವಿವರಿಸಿದ್ದಾರೆ. ಅವರು ಕೊನೆಯವರೆಗೂ ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಬಿಟ್ಟುಕೊಡಲಿಲ್ಲ’ ಎಂದು ಸ್ಮರಿಸಿದರು.

*ಪಶು, ಪಕ್ಷಿ, ಸರಿಸೃಪಗಳು ಸಹ ತಾವಿರುವ ಜಾಗವನ್ನು ಇಷ್ಟಪಡುತ್ತವೆ. ಹಾಗೆಯೇ ಮನುಷ್ಯನು ಕೂಡ. ಆ ಇಷ್ಟಕ್ಕೆ ದೇಶಭಕ್ತಿಯ ಹಣೆಪಟ್ಟಿ ಹಚ್ಚಬೇಕಿಲ್ಲ
-ಡಾ.ಆಶಿಸ್‌ ನಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.