
ಬೆಂಗಳೂರು: ‘ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಅಗತ್ಯ ಆರ್ಥಿಕ ಅನುಕೂಲ ಸುಗಮವಾಗಿ ಲಭ್ಯವಾಗುವಂತೆ ಮಾಡಲು ಆ್ಯಂಕರ್ ಬ್ಯಾಂಕ್ ಅನ್ನು ಒಂದು ತಿಂಗಳಲ್ಲಿ ಆರಂಭಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಮತ್ತು ನಗರ ಜೀವನೋಪಾಯ ಅಭಿಯಾನದಡಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 10 ದಿನಗಳ ‘ರಾಷ್ಟ್ರೀಯ ಸಂಜೀವಿನಿ ಸರಸ್ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರ ಸ್ವಸಹಾಯ ಸಂಘಗಳಿಗೆ ಬಲ ತುಂಬಲು ಈ ಬಾರಿಯ ಬಜೆಟ್‌ನಲ್ಲಿ ₹500 ಕೋಟಿ ಒದಗಿಸಲಾಗಿದೆ. ಈ ಮೂಲಕ ನಾಲ್ಕು ಲಕ್ಷ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು’ ಎಂದು ಹೇಳಿದರು.
‘ಈ ವರ್ಷ ಮಹಿಳಾ ಕಾರ್ಯಕ್ರಮಗಳಿಗೆ ₹47 ಸಾವಿರ ಕೋಟಿ ಮತ್ತು ಮಕ್ಕಳಿಗೆ ಸಂಬಂಧಿಸಿದ ನಾನಾ ಯೋಜನೆಗಳಿಗೆ ₹43 ಸಾವಿರ ಕೋಟಿಗಳಷ್ಟು ಅಗಾಧ ಮೊತ್ತವನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಒಂದು ವಾರದ ಒಳಗೆ ಆದೇಶಗಳನ್ನು ಹೊರಡಿಸಲಾಗುವುದು’ ಎಂದು ಬೊಮ್ಮಾಯಿ ತಿಳಿಸಿದರು.
‘ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಅಪಾರ ಪ್ರತಿಭೆ ಇದೆ. ಇವರು ತಯಾರಿಸುವ ಕಸೂತಿ ವಸ್ತ್ರಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅದನ್ನೇ ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ನೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವವರಿದ್ದಾರೆ. ಆದರೆ, ಕಸೂತಿಯನ್ನು ರಕ್ತಗತ ಮಾಡಿಕೊಂಡಿರುವ ಮಹಿಳೆಯರಿಗೆ ಗೌರವವೇ ದೊರೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬೆಂಗಳೂರಿನಲ್ಲಿ ವಾರ್ಷಿಕ ₹3 ಲಕ್ಷ ತಲಾವಾರು ಆದಾಯವಿದ್ದರೆ, ಬೀದರ್ ಜಿಲ್ಲೆಯಲ್ಲಿ ಕೇವಲ ₹1.50 ಲಕ್ಷ ಇದೆ. ತಲಾವಾರು ಆದಾಯದಲ್ಲಿ ರಾಜ್ಯವು ದೇಶದಲ್ಲಿ 4ನೇ ಸ್ಥಾನದಲ್ಲಿದ್ದರೂ ಒಟ್ಟು ಜನಸಂಖ್ಯೆಯ ಶೇ 30ರಷ್ಟು ಮಂದಿ ಮಾತ್ರ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಉಳಿದ ಶೇ 70ರಷ್ಟು ಮಂದಿಯನ್ನು ಕೂಡ ಸುಸ್ಥಿರ ಬದುಕಿನ ಜತೆಗೆ ಆರ್ಥಿಕ ಚಟುವಟಿಕೆಗಳ ಭಾಗವಾಗಿಸಬೇಕು ಎನ್ನುವುದು ಸರ್ಕಾರದ ಸಂಕಲ್ಪವಾಗಿದೆ’ ಎಂದರು.
ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ಮಹಿಳಾ ಸ್ತ್ರೀಸಹಾಯ ಸಂಘಗಳ ಸಬಲೀಕರಣಕ್ಕೆ ಕಾರ್ಪೊರೇಟ್ ಸಂಸ್ಥೆಗಳು, ನವೋದ್ಯಮಗಳು, ಸರ್ಕಾರೇತರ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ. ಜತೆಗೆ ಈ ಸಂಘಗಳ ಉತ್ಪನ್ನಗಳ ಬ್ರ್ಯಾಂಡಿಂಗ್, ಪ್ಯಾಕಿಂಗ್ ಮಾತ್ತು ಮಾರುಕಟ್ಟೆ ವಿಸ್ತರಣೆಗೆ ಒತ್ತು ಕೊಡಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.