ಬೆಂಗಳೂರು: ‘ಜಗತ್ತಿಗೆ ಜ್ಞಾನವನ್ನು ಉಪದೇಶ ಮಾಡಿದ ರಾಷ್ಟ್ರ ನಮ್ಮದಾಗಿದ್ದು, ನಮ್ಮ ಪ್ರಾಚೀನ ಜ್ಞಾನದ ಶಿಕ್ಷಣ ನೀತಿ ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಬೇಕು’ ಎಂದು ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದರು.
ಗುಜರಾತ್‌ನ ಪುನರುತ್ಥಾನ ವಿದ್ಯಾಪೀಠ, ಪೂರ್ಣಪ್ರಮತಿ-ಪರಿಪೂರ್ಣ ಕಲಿಕಾ ತಾಣ ಹಾಗೂ ವಿದ್ಯಾಕ್ಷೇತ್ರ ಗುರುಕುಲ ಜಂಟಿಯಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತೀಯ ಶಿಕ್ಷಣದ ಪುನರುತ್ಥಾನ’ ವಿದ್ವತ್ ಸಮ್ಮೇಳನದಲ್ಲಿ 1,051 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ, ಮಾತನಾಡಿದರು.
‘ವೇದ ವಿಶ್ವದ ಜ್ಞಾನಕೋಶವಾಗಿದ್ದು, ಸರ್ವವನ್ನೂ ತಿಳಿಸಿದೆ. ಹಾಗಾಗಿಯೇ ಭಾರತ ಅನಾದಿಕಾಲದಿಂದಲೂ ಜ್ಞಾನದ ತವರೂರೆಂದು ಕರೆಯಿಸಿಕೊಂಡಿದೆ. ನಮ್ಮಲ್ಲಿ ಅಪಾರವಾದಂತಹ ಜ್ಞಾನದ ಸಂಪತ್ತು ಇದ್ದರೂ ಅದನ್ನು ನಾವು ಮೂಲೆಗುಂಪು ಮಾಡಿದ್ದೇವೆ. ಇಂದಿಗೂ ಬ್ರಿಟಿಷ್ ಶಿಕ್ಷಣ ನೀತಿಯ ಸಂಕೋಲೆಯಲ್ಲೇ ಇದ್ದೇವೆ. ಈಗಲಾದರೂ ಬ್ರಿಟಿಷ್ ಶಿಕ್ಷಣ ನೀತಿಯಿಂದ ಭಾರತೀಯರು ಹೊರಬರಬೇಕು’ ಎಂದು ಹೇಳಿದರು.
‘ರಾಷ್ಟ್ರ ರಕ್ಷಣೆಯಾಗಬೇಕಾದರೆ ಪ್ರಾಚೀನ ಜ್ಞಾನದ ಪ್ರತಿಷ್ಠಾಪನೆಯಾಗಬೇಕು. ಅಯೋಧ್ಯೆಯ ರಾಮನ ಸನ್ನಿಧಿಯಲ್ಲಿ ಪ್ರಾಚೀನ ಜ್ಞಾನದ ಶಿಕ್ಷಣ ಕೇಂದ್ರವನ್ನು ನಿರ್ಮಿಸಬೇಕು. ದಕ್ಷಿಣ ಭಾರತದ ಪ್ರಾಚೀನ ಜ್ಞಾನದ ಶಿಕ್ಷಣ ಕೇಂದ್ರವನ್ನು ಕರ್ನಾಟಕದಲ್ಲಿ ನಿರ್ಮಾಣ ಮಾಡುವ ಕೆಲಸವಾಗಬೇಕು’ ಎಂದರು.
ಕೂಡಲಿ ಶೃಂಗೇರಿ ಶಾರದಾಪೀಠದ ಅಭಿನವ ಶಂಕರ ಭಾರತೀ ಸ್ವಾಮೀಜಿ, ‘ಭಾರತೀಯ ಶಿಕ್ಷಣದ ಬಗ್ಗೆ ವೈಚಾರಿಕ ಸ್ಪಷ್ಟತೆ ಬಾರದೆ ಭಾರತೀಯ ಶಿಕ್ಷಣದ ಪುನರುತ್ಥಾನ ಸಾಧ್ಯವಿಲ್ಲ. ಪಠ್ಯ ವಿಷಯವೇ ಬೇರೆ, ಪಠ್ಯಕ್ರಮವೇ ಬೇರೆ. ಔರಂಗಜೇಬ ಸೇರಿದಂತೆ ಹಲವರನ್ನು ಪಠ್ಯದಲ್ಲಿ ತೆಗೆದುಹಾಕಿ, ಅವರ ಜಾಗದಲ್ಲಿ ಶಿವಾಜಿ ಮಹಾರಾಜ ಸೇರಿದಂತೆ ಇನ್ನಿತರರನ್ನು ತಂದು ಹಾಕಿದ ಮಾತ್ರಕ್ಕೆ ಭಾರತೀಯ ಶಿಕ್ಷಣ ಆಗುವುದಿಲ್ಲ. ಆದ್ದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಮಾಡಿ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡಬೇಕು’ ಎಂದು ಹೇಳಿದರು.
ಅಹಮದಾಬಾದ್‌ನ ಪುನರುತ್ಥಾನ ವಿದ್ಯಾಪೀಠದ ಕುಲಪತಿ ಇಂದುಮತಿ ಕಟ್ದಾರೆ, ‘ಭಾರತವು ಜ್ಞಾನ ಹೊಂದಿದ ರಾಷ್ಟ್ರವಾಗಿದ್ದು, ಅದನ್ನು ಮರಳಿ ಪ್ರತಿಷ್ಠಾಪನೆ ಮಾಡಬೇಕಾಗಿದೆ. ಭಾರತೀಯತೆ ಅನಾವರಣ ಮಾಡುವ ಪಠ್ಯಗಳನ್ನು ರಚಿಸಿ, ವಿದ್ಯಾರ್ಥಿಗಳಿಗೆ ನೀಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.