ADVERTISEMENT

ಆನೇಕಲ್‌: 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್

ಸರ್ಕಾರಿ ಜಮೀನು ಕಬಳಿಕೆಗೆ ನಕಲಿ ದಾಖಲೆ ಸೇರ್ಪಡೆ: ವರದಿಗೆ ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 20:22 IST
Last Updated 28 ನವೆಂಬರ್ 2025, 20:22 IST
ಜಿಲ್ಲಾಧಿಕಾರಿ ಜಿ. ಜಗದೀಶ 
ಜಿಲ್ಲಾಧಿಕಾರಿ ಜಿ. ಜಗದೀಶ    

ಬೆಂಗಳೂರು: ನಕಲಿ ದಾಖಲೆಗಳ ಮೂಲಕ ಸರ್ಕಾರಿ ಜಮೀನು ಕಬಳಿಸಲು ಸಹಕರಿಸಿದ ಆರೋಪದ ಮೇಲೆ ಆನೇಕಲ್ ತಾಲ್ಲೂಕಿನ ಭೂ ದಾಖಲೆಗಳ ವಿಭಾಗದ 16 ಮಂದಿ ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಉಪ ತಹಸೀಲ್ದಾರ್‌ ಬಿ.ಕೆ.ಚಂದ್ರಶೇಖರ್, ಶಿರಸ್ತೇದಾರರಾದ ಮಾರುತಿಪ್ರಸಾದ್, ದಿನಕರನ್ ಜಿ, ಲೋಕೇಶ್ ಎಸ್, ಪ್ರಥಮ ದರ್ಜೆ ಸಹಾಯಕರಾದ ಮಹೇಶ್, ಮಂಗಳ, ನಾರಾಯಣ, ದ್ವಿತೀಯ ದರ್ಜೆ ಸಹಾಯಕರಾದ ಕೆ.ರಾಘವೇಂದ್ರ, ಮಂಜುನಾಥ್ ಎಂ.ವಿ, ಡಿ ದರ್ಜೆ ನೌಕರರಾದ ಕಲ್ಪನಾ ಪಿ, ಮಂಜುನಾಥ್, ಶೋಭಾ ಎನ್, ಪ್ರವೀಣ್, ಮುನಿರಾಜು, ಮಂಜುಳಮ್ಮ ಮತ್ತು ಮೀನಾಕ್ಷಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಮೂಲ ಮಂಜೂರಾತಿ ಕಡತ, ದರಖಾಸ್ತು ವಹಿ, ಸಾಗುವಳಿ ಚೀಟಿ, ಮಂಜೂರು ನಡಾವಳಿ ವಹಿ, ಇನಾಂ ಡಿಸಿ ಆದೇಶದ ಕಡತ, ಭೂ ಸುಧಾರಣೆ ಮೂಲ ಕಡತ ದಾಖಲೆಗಳೊಂದಿಗೆ ನಕಲಿ ದಾಖಲೆ ಸೇರಿಸಿ ಸರ್ಕಾರಿ ಜಮೀನನ್ನು ಕಬಳಿಸಲು ಸಹಕಾರ ನೀಡಿರುವುದು ಭೂಸುರಕ್ಷಾ ಯೋಜನೆಯಡಿಯಲ್ಲಿ ದಾಖಲೆಗಳನ್ನು ಸ್ಕ್ಯಾನ್ ಮಾಡುವ ವೇಳೆ ಕಂಡುಬಂದಿದೆ ಎಂದು ಆನೇಕಲ್ ತಹಸೀಲ್ದಾರ್‌ ವರದಿ ನೀಡಿದ್ದರು.

ADVERTISEMENT

‘ಈ ಕುರಿತು ಮರು ಪರಿಶೀಲಿಸಿದಾಗ ನಕಲಿ ದಾಖಲೆಗಳೆಂದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, 5 ವರ್ಷದಿಂದ ಅಭಿಲೇಖಾಲಯದಲ್ಲಿ ಕೆಲಸ ಮಾಡಿದ 16 ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪ್ರಕರಣ ದಾಖಲಿಸಲಾಗಿದೆ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

‘ಕಂದಾಯ ಇಲಾಖೆಯಡಿ ಬರುವ ಸರ್ಕಾರಿ ಜಮೀನುಗಳ ಕುರಿತು ಯಾವುದೇ ಆದೇಶ, ಇಲ್ಲವೇ ಖಾತೆ ಮಾಡುವ ಸಮಯದಲ್ಲಿ ತಮ್ಮ ಅನುಮತಿ ಪಡೆದುಕೊಳ್ಳಬೇಕು. ಆನೇಕಲ್ ತಾಲ್ಲೂಕಿನ ಸರ್ಕಾರಿ ಜಮೀನುಗಳ ಖಾತೆ ಬದಲಾವಣೆ ಆಗಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ’ ಎಂದು ಜಗದೀಶ್‌ ತಿಳಿಸಿದ್ದಾರೆ.

––

ದಾಖಲೆ ಸೃಷ್ಟಿಸುವಲ್ಲಿ ಸಹಕರಿಸಿದ ಖಾಸಗಿ ವ್ಯಕ್ತಿಗಳು ವ್ಯವಸ್ಥಿತ ಗುಂಪುಗಳ ಮೇಲೆಯೂ ವಿಚಾರಣೆ ನಡೆಸಿ ತಪ್ಪಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ತಹಸೀಲ್ದಾರ್‌ಗೆ ಸೂಚಿಸಲಾಗಿದೆ

–ಜಿ.ಜಗದೀಶ ಜಿಲ್ಲಾಧಿಕಾರಿ. ಬೆಂಗಳೂರು ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.