ADVERTISEMENT

ಆನೇಕಲ್ ಕರಗ ಮಹೋತ್ಸವ: ಕಾಸು ಕೊಟ್ಟು ಪೊರಕೆ, ಮೊರದಲ್ಲಿ ಏಟು ತಿಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 7:50 IST
Last Updated 19 ಏಪ್ರಿಲ್ 2022, 7:50 IST
ಆನೇಕಲ್‌ ಕರಗ ಮಹೋತ್ಸವದಲ್ಲಿ ನಡೆದ ಕೋಟೆ ಜಗಳದಲ್ಲಿ ಪೊರಕೆ, ಮೊರದಿಂದ ಹೊಡೆಯುತ್ತಿರುವ ಕಾಳಿ ವೇಷಧಾರಿ
ಆನೇಕಲ್‌ ಕರಗ ಮಹೋತ್ಸವದಲ್ಲಿ ನಡೆದ ಕೋಟೆ ಜಗಳದಲ್ಲಿ ಪೊರಕೆ, ಮೊರದಿಂದ ಹೊಡೆಯುತ್ತಿರುವ ಕಾಳಿ ವೇಷಧಾರಿ   

ಆನೇಕಲ್:‘ಪೊರಕೆ, ಮೊರದಲ್ಲಿ ಹೊಡೆಯುತ್ತೇನೆ’ ಎಂಬ ಬೈಗುಳ ಕೇಳಿರಬಹುದು. ಆದರೆ, ಕಾಸು ಕೊಟ್ಟು ಪೊರಕೆ, ಮೊರದಲ್ಲಿ ಹೊಡೆಸಿಕೊಳ್ಳುವ ವಿಶಿಷ್ಟ ಆಚರಣೆಯು ಪಟ್ಟಣದ ಧರ್ಮರಾಯಸ್ವಾಮಿ ದ್ರೌಪದಿ ದೇವಿ ಕರಗ ಮಹೋತ್ಸವ ನಡೆಯುತ್ತದೆ. ಇದಕ್ಕೆ ‘ಕೋಟೆ ಜಗಳ’ ಎಂದು ಕಡೆಯುವುದು ವಾಡಿಕೆ.

ಇಲ್ಲಿನ ಸಂತೆ ಮಾಳದಲ್ಲಿ ಹಸೀ ಕರಗದ ನಂತರ ಎರಡನೇ ದಿನವಾದ ಸೋಮವಾರ ಈ ವಿಶಿಷ್ಟ ಧಾರ್ಮಿಕ ಆಚರಣೆ ನಡೆಯಿತು. ಸಂತೆ ಮಾಳದ ಮರವೊಂದರ ಕಟ್ಟೆಯ ಸುತ್ತಲೂ ಕೋಟೆ ಜಗಳಕ್ಕಾಗಿ ಜನರು ಜಮಾಯಿಸಿದ್ದರು.

ಕೋಟೆ ಜಗಳದಲ್ಲಿ ಕಾಳಿ ದೇವಿಯ ಆವಾಹನೆಗೊಳಗಾದ ವ್ಯಕ್ತಿಯು ಕರಗದ ಗುಡಿಯಲ್ಲಿ ಗುಡಿಸಿದ ಪೊರಕೆ, ಮೊರವನ್ನು ಹಿಡಿದು ಗಡಿಯ ಸುತ್ತಲೂ ಸುತ್ತುತ್ತಾರೆ. ಇವರಿಂದ ದೇವಾಲಯ ಗುಡಿಸಿದ ಪೊರಕೆ, ಮೊರಗಳಿಂದ ಹೊಡೆಸಿಕೊಂಡರೇ ಒಳ್ಳೆಯದಾಗುವುದು ಮತ್ತು ನಕಾರಾತ್ಮಕ ಅಂಶಗಳು ನಾಶವಾಗುತ್ತದೆ ಎಂಬುದು ಭಕ್ತರ ನಂಬಿಕೆ.

ADVERTISEMENT

ಹಾಗಾಗಿ, ಈ ವ್ಯಕ್ತಿಯು ಸುತ್ತು ಹಾಕುತ್ತಾ ಬರುತ್ತಿದ್ದಂತೆ ಗಡಿಯ ಹೊರಗಡೆ ನಿಂತಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಕಾಳಿ ವೇಷಧಾರಿಗೆ ಹಣ ನೀಡಿ ಪೊರಕೆ, ಮೊರದಲ್ಲಿ ಹೊಡೆಸಿಕೊಳ್ಳಲು ಮುಗಿಬಿದ್ದರು. ಜನರನ್ನು ನಿಭಾಯಿಸಲು ಕರಗ ಸಮಿತಿ ಪದಾಧಿಕಾರಿಗಳು ಹರಸಾಹಸಪಟ್ಟರು.

ಗಡಿಯ ಸುತ್ತಲೂ ಸುತ್ತುವ ಸಂದರ್ಭದಲ್ಲಿ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ಹಾಗೂ ಗಂಟೆಯ ನೀನಾದ ನಿರಂತರವಾಗಿ ನಡೆಯುತ್ತಿತ್ತು. ದ್ರೌಪದಿ ದೇವಿಯೇ ಕಾಳಿ ವೇಷದಲ್ಲಿ ಆವಾಹನೆಗೊಳ್ಳುತ್ತಾಳೆ ಎಂಬುದು ಭಕ್ತರ ನಂಬಿಕೆ.

ಈ ವ್ಯಕ್ತಿಯು ಇದೇ ಸಂದರ್ಭದಲ್ಲಿ ಬಲಿ ನೀಡಲಾದ ಮೇಕೆಯ ಶ್ವಾಸಕೋಶವನ್ನು ಬಾಯಿಯಲ್ಲಿ ಕಚ್ಚಿಕೊಂಡು ಸಿಕ್ಕ ಸಿಕ್ಕವರಿಗೆ ಪೊರಕೆ, ಮೊರದಲ್ಲಿ ಹೊಡೆಯುವ ಸನ್ನಿವೇಶ ಸ್ಥಳದಲ್ಲಿದ್ದವರಿಗೆ ರೋಮಾಂಚನ ಮೂಡಿಸಿತು.

ಬೃಹತ್‌ ವೀರ ವಸಂತರಾಯ
ಕರಗದ ಉತ್ಸವದಲ್ಲಿ ಕುರುಕ್ಷೇತ್ರದ ವಿವಿಧ ಅಂಶಗಳನ್ನು ಆಚರಣೆ ರೂಪದಲ್ಲಿ ಇಂದಿಗೂ ನಡೆಸುತ್ತಾ ಬರಲಾಗಿದೆ. ಉತ್ಸವದ ಅಂಗವಾಗಿ ವೀರ ವಸಂತರಾಯನ ಬೃಹತ್ ಮೂರ್ತಿಯನ್ನು ಸ್ಥಾಪಿಸಲಾಗಿದೆ.

ಕುರುಕ್ಷೇತ್ರ ಯುದ್ಧಕ್ಕೆ ಮುನ್ನ ಗೆಲುವಿಗಾಗಿ ಪಾಂಡವರು ವ್ಯಕ್ತಿಯೊಬ್ಬರನ್ನು ಬಲಿ ಕೊಡಬೇಕಾಗಿತ್ತು. ಬಲಿ ಕೊಡುವ ವ್ಯಕ್ತಿಯ ರೋಮಗಳು ವಿರುದ್ಧ ದಿಕ್ಕಿಗೆ ಇರಬೇಕು ಎಂಬ ನಿಯಮವಿತ್ತು. ಅದರಂತೆ ಕೃಷ್ಣನು ಅಂತಹ ವ್ಯಕ್ತಿಯನ್ನು ಹುಡುಕುತ್ತಾ ಹೊರಟಾಗ ಒಂದು ಬೆಟ್ಟದ ಮೇಲೆ ಕುಳಿತು ಮತ್ತೊಂದು ಬೆಟ್ಟಕ್ಕೆ ಕಾಲನಿಟ್ಟುಕೊಂಡು ತನ್ನ ಆಯುಧವನ್ನು ಸಿದ್ಧ ಮಾಡುತ್ತಿದ್ದ ಬಲಿಶಾಲಿಯಾದ ವ್ಯಕ್ತಿ ಕಂಡರು.

ಈ ವ್ಯಕ್ತಿಯೊಂದಿಗೆ ಮಾತನಾಡಿ ಕೃಷ್ಣ ಬಲಿಗೆ ಒಪ್ಪಿಸಿದ. ಆದರೆ, ವೀರ ವಸಂತರಾಯ ಕೃಷ್ಣನಲ್ಲಿ ಒಂದು ಬೇಡಿಕೆ ಇಟ್ಟ. ಯುದ್ಧ ಹಾಗೂ ಪಾಂಡವರು ಗೆಲ್ಲುವುದನ್ನು ತಾನು ನೋಡಬೇಕು ಎಂಬ ಬೇಡಿಕೆಯನ್ನಿಟ್ಟ. ಆಗ ಕೃಷ್ಣ ಬಲಿಯ ನಂತರ ರುಂಡಕ್ಕೆ ಜೀವ ನೀಡಿ ಬಲಿಪೀಠದ ಮೇಲೆ ಕುಳ್ಳರಿಸಿ ಯುದ್ಧ ನೋಡಲು ಅನುಕೂಲ ಮಾಡಿಕೊಡುತ್ತಾರೆ. ಯುದ್ಧದ ನಂತರ ವೀರವಸಂತರಾಯನ ಶಿರಚ್ಛೇದ ಮಾಡಲಾಗಿತ್ತು. ಅದರಂತೆ ಒಣ ಕರಗದದಂದು ವೀರವಸಂತರಾಯನ ಶಿರಚ್ಛೇದ ಮಾಡಲಾಗುವುದು ಎಂದು ಮುಖಂಡ ರಾಮಯ್ಯ ತಿಳಿಸಿದರು.

ಒಣ ಕರಗ: ಧರ್ಮರಾಯಸ್ವಾಮಿ ದ್ರೌಪದಿ ದೇವಿ ಒಣಕರಗ ಮಹೋತ್ಸವ ಮಂಗಳವಾರ (ಏ.19) ರಾತ್ರಿ 2ಕ್ಕೆ ನಡೆಯಲಿದೆ. ಅಗ್ನಿಕೊಂಡ ಪ್ರವೇಶ ಹಾಗೂ ವೀರವಸಂತರಾಯನ ಶಿರಚ್ಛೇದನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.